ಮತಾಂತರ ತಡೆ ಕಾಯ್ದೆ ಜಾರಿ: ಮುಸ್ಲಿಮ್ ವ್ಯಕ್ತಿಯ ವಿರುದ್ಧ ಮೊದಲ ಪ್ರಕರಣ ದಾಖಲು

Prasthutha|

ಬೆಂಗಳೂರು: ಸೆಪ್ಟೆಂಬರ್ 30ರಂದು ಅಧಿಸೂಚನೆ ಹೊರಡಿಸಲಾದ ಮತಾಂತರ ವಿರೋಧಿ ಕಾನೂನು ಎಂದು ಕರೆಯುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ರಾಜ್ಯ ಪೊಲೀಸರು ಮೊದಲ ಪ್ರಕರಣವನ್ನು ದಾಖಲಿಸಿದ್ದಾರೆ.

- Advertisement -

ಯಶವಂತಪುರ ಪೊಲೀಸರು ಅಕ್ಟೋಬರ್ 13ರಂದು ಐಪಿಸಿ ಸೆಕ್ಷನ್ 5ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಉತ್ತರ ಬೆಂಗಳೂರಿನ ಬಿಕೆ ನಗರದ ನಿವಾಸಿ ಸೈಯದ್ ಮುಯಿನ್ ಎಂಬವರನ್ನು ಬಂಧಿಸಿದ್ದಾರೆ.

18 ವರ್ಷದ ಖುಷ್ಬೂ ಎಂಬವರನ್ನು ಮದುವೆಯಾಗುವುದಾಗಿ ಆಮಿಷ ನೀಡಿ ಇಸ್ಲಾಮ್’ಗೆ ಮತಾಂತರ ಮಾಡಿದ ಆರೋಪದಲ್ಲಿ ಚಿಕನ್ ಸ್ಟಾಲ್ ಉದ್ಯಮವನ್ನು ನಡೆಸುತ್ತಿರುವ ಮುಯಿನ್ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

- Advertisement -

ಖುಷ್ಬೂ ಕುಟುಂಬ ಉತ್ತರ ಪ್ರದೇಶದ ಗೋರಖ್’ಪುರ ಮೂಲದವರಾಗಿದ್ದು, ಕಳೆದ 10 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದೆ. ಆಕೆಯ ತಂದೆ ಸುರೇಂದ್ರ ಯಾದವ್ ವೃತ್ತಿಯಲ್ಲಿ ಪೇಂಟರ್ ಆಗಿದ್ದು, ತಾಯಿ ಜ್ಞಾನಿದೇವಿ ಗೃಹಿಣಿ. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಕ್ಕಳು ಇದ್ದಾರೆ.

ಖುಷ್ಬೂ ನಾಪತ್ತೆಯಾದ ಕೆಲವೇ ಗಂಟೆಗಳ ಬಳಿಕ ತಾಯಿ ಜ್ಞಾನಿದೇವಿ ಅಕ್ಟೋಬರ್ 5 ರಂದು ಪೊಲೀಸ್ ದೂರು ದಾಖಲಿಸಿದ್ದಾರೆ. ಕಳೆದ 6 ತಿಂಗಳಿನಿಂದ ಖುಷ್ಬೂ ಅವರನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಲು ಪ್ರಯತ್ನಿಸುತ್ತಿದ್ದ ಮಯಿನ್’ನೊಂದಿಗೆ ತನ್ನ ಮಗಳು ಓಡಿಹೋಗಿದ್ದಾಳೆ ಎಂದು ತಾಯಿ ಜ್ಞಾನಿದೇವಿ ಪೊಲೀಸರಲ್ಲಿ ದೂರಿದ್ದಾರೆ. ಆದರೆ ಈ ದೂರು ಧಾರ್ಮಿಕ ಮತಾಂತರವನ್ನು ಖಚಿತಪಡಿಸಿಲ್ಲ.

ಈ ಮಧ್ಯೆ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಖುಷ್ಬೂಗಾಗಿ ಹುಡುಕಾಟ ಆರಂಭಿಸಿದ್ದಾರೆ. ಮೂರು ದಿನಗಳ ನಂತರ, ಅಕ್ಟೋಬರ್ 8 ರಂದು ಖುಷ್ಬೂ ಹಿಂದಿರುಗಿದ್ದಾರೆ. ಆಗ ತಾನು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದಾಗಿ ಅವರ ಕುಟುಂಬಕ್ಕೆ ತಿಳಿಸಿದ್ದಾರೆ. ಇದನ್ನು ವಿರೋಧಿಸಿದ ಖುಷ್ಬೂ ಹೆತ್ತವರು ‘ಇದು ಬಲವಂತದ ಮತಾಂತರ’ ಎಂದು ಆರೋಪಿಸಿ ಅಕ್ಟೋಬರ್ 13 ರಂದು ಮತ್ತೊಂದು ಪೊಲೀಸ್ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದಲಿ ಪೊಲೀಸರು ಮತಾಂತರ ತಡೆ ಕಾಯ್ದೆಯ ಸೆಕ್ಷನ್ 5 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ನೂತನ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದೇವೆ. ಇದು ಮದುವೆಯ ಭರವಸೆಯ ಮೇರೆಗೆ ಧಾರ್ಮಿಕ ಮತಾಂತರದ ಪ್ರಕರಣವಾಗಿದೆ ಎಂದು ಉಪ ಪೊಲೀಸ್ ಕಮಿಷನರ್ ವಿನಾಯಕ ಪಾಟೀಲ್ ತಿಳಿಸಿದ್ದಾರೆ.

ಖುಷ್ಬೂ ಅವರು ಸ್ವ-ಇಚ್ಛೆಯಂತೆ ಇಸ್ಲಾಮ್ ಧರ್ಮಕ್ಕೆ ಮತಾಂತರಗೊಂಡಂತೆ ಮೇಲ್ನೋಟಕ್ಕೆ ಕಂಡುಬಂದಿದೆ. ಆದರೆ ಹೊಸ ಕಾನೂನಿನ ಅಡಿಯಲ್ಲಿ ನಿಗದಿಪಡಿಸಿದ ವಿಧಾನವನ್ನು ಅನುಸರಿಸಲಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮತಾಂತರಗೊಳ್ಳಲು ತೀರ್ಮಾನಿಸಿದ ಯಾವುದೇ ವ್ಯಕ್ತಿ ಕನಿಷ್ಠ 30 ದಿನಗಳ ಮೊದಲು ಫಾರ್ಮ್ -1 ಮೂಲಕ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಥವಾ ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಬೇಕಾಗುತ್ತದೆ. ಮತಾಂತರಗೊಳ್ಳುವ ಕನಿಷ್ಠ 30 ದಿನಗಳ ಮೊದಲು ಫಾರ್ಮ್ 2 ಅನ್ನು ಸಲ್ಲಿಸಬೇಕು ಎಂದು ನೂತನ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ.

ಈ ವೇಳೆ ಧಾರ್ಮಿಕ ಮತಾಂತರಕ್ಕೆ ಆಕ್ಷೇಪಣೆ ಇದ್ದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್’ಗೆ ಕರೆ ಮಾಡಬೇಕು. 30 ದಿನಗಳ ಒಳಗಾಗಿ ಆಕ್ಷೇಪಣೆ ಬಂದಲ್ಲಿ ಕಂದಾಯ ಅಥವಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ವಿಚಾರಣೆ ನಡೆಸಬೇಕು. ಈ ವಿಚಾರಣೆಯು ಮತಾಂತರದ ನಿಜವಾದ ಉದ್ದೇಶ, ಕಾರಣವನ್ನು ಕೇಂದ್ರೀಕರಿಸಿರುತ್ತದೆ. ವಿಚಾರಣೆಯ ವೇಳೆ ತಪ್ಪು ಕಂಡುಬಂದಲ್ಲಿ ಈ ಕಾಯ್ದೆ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿಗಳು ಪೊಲೀಸರಿಗೆ ಸೂಚಿಸಬೇಕು ಎಂದು ಕಾಯ್ದೆಯಲ್ಲಿ ನಮೂದಿಸಲಾಗಿದೆ.

ಈ ಪ್ರಕರಣದಲ್ಲಿ ಮತಾಂತರಗೊಳ್ಳುವ ಮೊದಲು ದಂಪತಿ ಮದುವೆಯಾಗಿರಲಿಲ್ಲ. ಆರೋಪಿ ಮುಯಿನ್ ಎಂಬವರು ಯುವತಿಯನ್ನು ಆಂಧ್ರಪ್ರದೇಶದ ಪೆನುಕೊಂಡ ದರ್ಗಾಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಮತಾಂತರ ಮಾಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ ಮತಾಂತರಗೊಂಡ ಕುರಿತು ಯುವತಿಯನ್ನು ಪೊಲೀಸರು ವಿಚಾರಿಸಿದಾಗ, ಆಕೆ ಬಲವಂತದ ಮತಾಂತರ ಪ್ರಕ್ರಿಯೆಯನ್ನು ನಿರಾಕರಿಸಿದ್ದಾಳೆ.

ನೂತನ ಕಾಯ್ದೆಯ ಸೆಕ್ಷನ್ 5 ರ ಅಡಿಯಲ್ಲಿ ಬಲವಂತದ ಮತಾಂತರಕ್ಕೆ ಮೂರರಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 25,000 ರೂ. ದಂಡ ವಿಧಿಸಲು ಅವಕಾಶ ನೀಡಲಾಗಿದೆ. ನ್ಯಾಯಾಲಯವು ಮುಯಿನ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.



Join Whatsapp