ಪಠ್ಯಕ್ರಮದಲ್ಲಿ ದ್ವೇಷ ಭಾವನೆ ಮೂಡಿಸುವ ಹುನ್ನಾರ: ಕರ್ನಾಟಕ ರಕ್ಷಣಾ ವೇದಿಕೆ ಆರೋಪ

Prasthutha|

ದಾವಣಗೆರೆ: ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯ ಪರಿಷ್ಕರಣ ಸಮಿತಿ ರದ್ಧುಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ವತಿಯಿಂದ  ನಗರದಲ್ಲಿ ಪ್ರತಿಭಟನೆ ನಡೆಯಿತು.

- Advertisement -

ಪಠ್ಯಕ್ರಮದಲ್ಲಿ ದ್ವೇಷ ಭಾವನೆ ಮೂಡಿಸುವ ಕೆಲಸಕ್ಕೆ ಮುಂದಾಗಿರುವ ಚಕ್ರತೀರ್ಥ ಅವರ  ಭಾವಚಿತ್ರಕ್ಕೆ ಪ್ರತಿಭಟನಾಕಾರರು ಚಪ್ಪಲಿಯಲ್ಲಿ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ವೇಳೆ  ಮಾತನಾಡಿದ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ, ಬರಗೂರು ರಾಮಚಂದ್ರಪ್ಪ ನೇತೃತ್ವದ ಪಠ್ಯ ಪರಿಷ್ಕರಣ ಸಮಿತಿ ಸಿದ್ದಪಡಿಸಿದ್ದ ಶಾಲಾ ಪಠ್ಯ ಪುಸ್ತಕಗಳನ್ನು ಮರು ಪರಿಷ್ಕರಿಸಲು ನೇಮಿಸಿದ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯು ಭಾಷಾ ಪಠ್ಯ ಹಾಗೂ ಸಮಾಜ ವಿಜ್ಞಾನ ಪಠ್ಯಗಳನ್ನು ತಮಗೆ ಬೇಕಾದ ರೀತಿಯಲ್ಲಿ ಬದಲಾವಣೆ ಮಾಡಿದೆ. ಇದೀಗ ಮರು ಪರಿಷ್ಕರಿಸಿದ ಪಠ್ಯ ಪುಸ್ತಕಗಳನ್ನು ಸರ್ಕಾರವು  ಮಕ್ಕಳಿಗೆ ಹಂಚಲು ಹೊರಟಿದೆ. ಈ ಕ್ರಮ  ಬೇಜವಾಬ್ಧಾರಿತನದಿಂದ ಕೂಡಿದ್ದು,  ಲಕ್ಷಾಂತರ ಮಕ್ಕಳ ಭವಿಷ್ಯ, ಶಿಕ್ಷಣ ವ್ಯವಸ್ಥೆ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ದೂರಿದರು.

- Advertisement -

ರೋಹಿತ್  ಚಕ್ರತೀರ್ಥ ಒಬ್ಬ ಕನ್ನಡ ವಿರೋಧಿ ಕಿಡಿಗೇಡಿ. ಕನ್ನಡ ಧ್ವಜವನ್ನು ತನ್ನ ಒಳ ಉಡುಪಿಗೆ ಹೋಲಿಸಿ ಕನ್ನಡದ ಅಸ್ಮಿತೆಯನ್ನು ಲೇವಡಿ ಮಾಡಿದ್ದ ವ್ಯಕ್ತಿ. ಆತನನ್ನು ಸಮರ್ಥಿಸಿರುವ  ಶಿಕ್ಷಣ ಸಚಿವ ನಾಗೇಶ್  ಆತ ಐಐಟಿ, ಸಿಇಟಿ ಪ್ರಾಧ್ಯಾಪಕ  ಎಂದೆಲ್ಲಾ ಹಸಿ ಹಸಿ ಸುಳ್ಳು ಹೇಳಿ ನಗೆಪಾಟಲಿಗೀಡಾಗಿದ್ದಾರೆ. ಕುವೆಂಪು ಬರೆದ ನಾಡಗೀತೆಯನ್ನೇ ವಿಕೃತಗೊಳಿಸಿದ ಚಕ್ರತೀರ್ಥರಂತಹ ವ್ಯಕ್ತಿಗೆ ಅವಕಾಶ ಕೊಟ್ಟ ಸರ್ಕಾರ ಕನ್ನಡಿಗರ ಕ್ಷಮೆ ಕೇಳಿ, ಸಮಿತಿಯನ್ನು ರದ್ದುಪಡಿಸಬೇಕು. ಹಳೆ ಪಠ್ಯಕ್ರಮವನ್ನೇ ಮುಂದುವರಿಸಬೇಕು. ಪಠ್ಯ ಪರಿಷ್ಕರಣೆ ಅಗತ್ಯವೆನಿಸಿದರೆ ಅರ್ಹರನ್ನು ನೇಮಿಸಬೇಕುಎಂದು ಸಲಹೆ ನೀಡಿದರು.

ಸರ್ಕಾರವು ನೇಮಿಸಿದ ಸಮಿತಿಯಲ್ಲಿ ಶಿಕ್ಷಣ ತಜ್ಞರೇ  ಇಲ್ಲ. ಹಿರಿಯ ಸಾಹಿತಿಗಳಾದ ಪಿ. ಲಂಕೇಶ್, ಸಾರಾ ಅಬೂಬಕರ್, ಗೋರೂರು ರಾಮಸ್ವಾಮಿ ಅಯ್ಯಂಗಾರ್, ಅರವಿಂದ ಮಾಲಗತ್ತಿ, ಬಿ.ಟಿ. ಲಲಿತಾ ನಾಯಕ್ ಮೊದಲಾದವರ ಮೌಲಿಕ ಪಠ್ಯಗಳನ್ನು ಕಿತ್ತು ಹಾಕಿ ಕನ್ನಡದ ಚಿಂತನೆಯನ್ನು ಅವಮಾನಿಸಲಾಗಿದೆ. 10ನೇ ತರಗತಿ ಸಮಾಜ ವಿಜ್ಞಾನ ಪಠ್ಯದಿಂದ ನಾರಾಯಣ ಗುರುಗಳ ಪಾಠ ತೆಗೆಯಲಾಗಿದೆ. ಇವುಗಳ ಬದಲಿಗೆ ಸಂಘ ಪರಿವಾರದ ಸಿದ್ಧಾಂತ, ಸಂಘಟನೆ ಪರವಾದ ಪಠ್ಯ ತುರುಕಲಾಗಿದೆ. ಈ ಪಾಠಗಳು ಕುವೆಂಪು ಹೇಳಿದ ವಿಶ್ವಮಾನತೆ ವಿರುದ್ಧ ದಿಕ್ಕಿನಲ್ಲಿವೆ ಎಂದು ಆರೋಪಿಸಿದರು.



Join Whatsapp