ಕೊಳ್ಳೇಗಾಲ: ತನ್ನ ಬಳಿ ಸಹಾಯ ಯಾಚಿಸಿ ಬಂದ ಮಹಿಳೆಗೆ ವಸತಿ ಸಚಿವ ವಿ. ಸೋಮಣ್ಣ ಕಪಾಳ ಮೋಕ್ಷ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರು ಮಾಡಿದ ತಪ್ಪಿಗೆ ಕ್ಷಮೆ ಕೋರಿದ್ದಾರೆ.
‘ಆ ಹೆಣ್ಣುಮಗಳು ಪದೇ ಪದೇ ವೇದಿಕೆ ಮೇಲೆ ಬರುತ್ತಿದ್ದಳು. ‘ತಾಯಿ ಎಷ್ಟು ಸಾರಿ ಬರುತ್ತೀಯಾ’ ಎಂದು ವಿಚಾರಿಸಿದೆ. ‘ನಿನ್ನ ಸಮಸ್ಯೆ ಬಗೆಹರಿಸುತ್ತೇನೆ’ ಎಂದು ಕೈಯಲ್ಲಿ ಪಕ್ಕಕ್ಕೆ ಸರಿಸಿದ್ದೇನೆಯೇ ವಿನಃ ಬೇರೆ ಏನೂ ಮಾಡಲಿಲ್ಲ. ನನ್ನ ನಡೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ ಬಿಡಿ’ ಎಂದು ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ ಹೇಳಿದ್ದಾರೆ.
‘ಹೆಣ್ಣು ಮಕ್ಕಳ ಬಗ್ಗೆ ಅಪಾರ ಗೌರವ ಇದೆ. ಪ್ರತಿಯೊಬ್ಬ ಹೆಣ್ಣನ್ನು ನಾನು ಗೌರವಿಸುತ್ತೇನೆ. ಆ ಹೆಂಗಸಿನ ಬೇಡಿಕೆಯನ್ನು ಈಡೇರಿಸಿದ್ದೇನೆ’ ಎಂದಿದ್ದಾರೆ.
ಗುಂಡ್ಲುಪೇಟೆ ತಾಲ್ಲೂಕಿನ ಹಂಗಳದಲ್ಲಿ ಶನಿವಾರ ಸಂಜೆ ನಡೆದ ಕಾರ್ಯಕ್ರಮವೊಂದರಲ್ಲಿ ಸಹಾಯ ಕೇಳಿ ಬಂದ ಮಹಿಳೆಯ ಕೆನ್ನೆಗೆ ಸಚಿವ ವಿ. ಸೋಮಣ್ಣ ಹೊಡೆದಿದ್ದರು. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದವು. ಸಚಿವರ ಈ ನಡೆಯ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.