ರಾಜ್ಯದಲ್ಲಿನ ಬೆಳವಣಿಗೆ ಬಗ್ಗೆ ಪ್ರಧಾನಿ ಪರಾಮರ್ಶೆ ನಡೆಸಲಿ: ಮಲ್ಲಿಕಾರ್ಜುನ ಖರ್ಗೆ

Prasthutha|

ಕಲ್ಬುರ್ಗಿ: ರಾಜ್ಯ ಸರ್ಕಾರ ಕಾಮಗಾರಿಗಳಲ್ಲಿ ನನ್ನಿಂದ ಕಮಿಷನ್ ನೀಡುವಂತೆ ಬಲವಂತ ಪಡಿಸಲಾಗುತ್ತಿರುವ ಕುರಿತು ಗುತ್ತಿಗೆದಾರರು ನೇರವಾಗಿ ಪ್ರಧಾನಿಗೆ ದೂರು ನೀಡಿದ ಹೊರತಾಗಿಯೂ ಅಂತಹವರ ವಿರುದ್ಧ ಯಾವುದೇ ಕ್ರಮ ಜರುಗಿಸಲು ಸಾಧ್ಯವಾಗಿಲ್ಲ. ಇದು ಮುಂದುವರಿದು ಸಂತೋಪ್ ಪಾಟೀಲ್ ಎಂಬ ಗುತ್ತಿಗೆದಾರನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಸಕ್ತ ರಾಜ್ಯದಲ್ಲಿನ ಬೆಳವಣಿಗೆಯ ಬಗ್ಗೆ ಪ್ರಧಾನಿ ಮೋದಿ ಪರಾಮರ್ಶೆ ನಡೆಸಲಿ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಛೇಡಿಸಿದ್ದಾರೆ.

- Advertisement -

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಮಿಷನ್ ರಾಜಕೀಯ ಮೇಲಾಟ ನಡೆಯುತ್ತಿದ್ದು, ಇದರ ಬಗ್ಗೆ ಪ್ರಧಾನಿ ಮೋದಿ ಗಮನ ಹರಿಸಲಿ. ಅದು ಬಿಟ್ಟು ತಾವು ಮಾಡಿದ್ದೇ ಸರಿ ಎಂಬ ಭ್ರಮೆಯಲ್ಲಿದ್ದಾರೆ ಎಂದು ಕುಟುಕಿದ್ದಾರೆ.

ಬಿಜೆಪಿ ಸರ್ಕಾರ ದುರಾಡಳಿತ ಮತ್ತು ಕಮಿಷನ್ ದಂಧೆಗೆ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಡಬಲ್ ಇಂಜಿನ್ ಸರ್ಕಾರವೆಂದು ಜಂಬ ಕೊಚ್ಚಿಕೊಳ್ಳುತ್ತಿದ್ದವರು ರಾಜ್ಯದ ಜನತೆಯನ್ನು ವಂಚಿಸುತ್ತಿದ್ದಾರೆ. ಮುಖ್ಯಮಂತ್ರಿಯ ದೆಹಲಿ ಪ್ರವಾಸದ ವೇಳೆ ಇದರಿಂದ ಸರ್ಕಾರಕ್ಕೆ ಮತ್ತು ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತದೆ. ಇದನ್ನು ತಡೆಯುವಂತೆ ಸೂಚಿಸಿದ್ದೆ ಎಂದ ಖರ್ಗೆ, ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಕುರಿತು ಸರ್ಕಾರ ತಕ್ಷಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.

- Advertisement -

ತನ್ನನ್ನು ಇಡಿ ಇಲಾಖೆ ವಿಚಾರಣೆಗೊಳಪಡಿಸಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಖರ್ಗೆ, ಇದು ಪಕ್ಷದ ಆಂತರಿಕ ವಿಚಾರ. ಈ ಬಗ್ಗೆ ಇಲ್ಲಿ ಮಾತನಾಡುವುದಿಲ್ಲ ಎಂದು ತಿಳಿಸಿದ್ದಾರೆ.

Join Whatsapp