ಬೆಂಗಳೂರು: ಮುಸ್ಲಿಮ್ ಚಾಲಕರೊಬ್ಬರು ಟೋಪಿ ಧರಿಸುವುದನ್ನು ವಿರೋಧಿಸಿ ಸರ್ಕಾರಿ ಸ್ವಾಮ್ಯದ BMTC ನೌಕರರ ಒಂದು ಗುಂಪು ಕೇಸರಿ ಶಾಲು ಧರಿಸಿ ಕರ್ತವ್ಯಕ್ಕೆ ಹಾಜರಾದ ಘಟನೆ ರಾಜಧಾನಿಯಲ್ಲಿ ನಡೆದಿದೆ.
ಹಿಜಾಬ್ ಗದ್ದಲದಿಂದಾಗಿ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಿದ ಬೆನ್ನಲ್ಲೇ ಬಿಎಂಟಿಸಿಯ ಹಿಂದೂ ನೌಕಕರು ತಮ್ಮ ಮುಸ್ಲಿಮ್ ಸಹೋದ್ಯೋಗಿಗಳು ಟೋಪಿ ಧರಿಸುವುದನ್ನು ವಿರೋಧಿಸಿದ್ದಾರೆ. ಇದು BMTC ನಿಗದಿಪಡಿಸಿದ ಸಮಾನ ನಿಯಮಗಳ ಉಲ್ಲಂಘನೆ ಎಂದು ಆರೋಪಿಸಿದ್ದಾರೆ.
ಈ ಮಧ್ಯೆ BMTC ಸಂಸ್ಥೆಯಲ್ಲಿ ಸಮಾನ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮತ್ತು ಮುಸ್ಲಿಮ್ ಸಿಬ್ಬಂದಿ ಟೋಪಿ ಧರಿಸುವುದನ್ನು ತಪ್ಪಿಸಲು ಕೇಸರಿ ಕಾರ್ಮಿಕರ ಸಂಘ ಎಂಬ ಹೆಸರಿನಲ್ಲಿ ತಂಡವನ್ನು ರಚಿಸಲಾಗಿದೆ ಎನ್ನಲಾಗಿದೆ. ಸುಮಾರು 1500 ನೌಕಕರು ಸಂಘದ ಅಡಿಯಲ್ಲಿ ನೋಂದಾಯಿಸಲ್ಪಟ್ಟಿದ್ದಾರೆ ಮತ್ತು ಕರ್ತವ್ಯದ ವೇಳೆ ಮುಸ್ಲಿಮರು ಟೋಪಿ ಧರಿಸುವುದನ್ನು ನಿಷೇಧಿಸುವ ತನಕ ಕೇಸರಿ ಶಾಲುಗಳನ್ನು ಧರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ BMTC ಉಪಾಧ್ಯಕ್ಷ ಎಂ.ಆರ್. ವೆಂಕಟೇಶ್, ಮಾಧ್ಯಮಗಳ ಮೂಲಕ ಈ ವಿಷಯ ತಿಳಿಯಿತು. ಇದಕ್ಕೆ ಪ್ರಾಮುಖ್ಯತೆ ನೀಡದಂತೆ ಮನವಿ ಮಾಡಿದ್ದೇನೆ. ಬಿಎಂಟಿಸಿಯಲ್ಲಿ ಪೊಲೀಸ್ ಇಲಾಖೆಯಂತೆಯೇ ಏಕರೂಪದ ವಸ್ತ್ರಸಂಹಿತೆ ಇದೆ. ಎಲ್ಲಾ ನೌಕಕರು ಇದನ್ನು ಅನುಸರಿಸುತ್ತಿದ್ದಾರೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ತಿಳಿಸಿದ್ದಾರೆ.
ನೂತವಾಗಿ ಆರಂಭಿಸಲಾದ “ಕೇಸರಿ ಕಾರ್ಮಿಕರ ಸಂಘ” ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದನ್ನು ಪ್ರೋತ್ಸಾಹಿಸಲಾಗುವುದಿಲ್ಲ ಮತ್ತು ಕಾನೂನು ಕ್ರಮವನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು.
“ನಾವು ಎಲ್ಲಾ ಡಿಪೋಗಳಿಗೆ ನಿರ್ದೇಶನಗಳನ್ನು ನೀಡುತ್ತೇವೆ ಮತ್ತು ಗೊಂದಲಕ್ಕೆ ಅವಕಾಶ ನೀಡದೆ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುತ್ತೇವೆ ಎಂದರು.