ಹಿಜಾಬ್ ವಿಚಾರ । ಕಾಲೇಜು ಸಿಬ್ಬಂದಿ ದ್ವೇಷವನ್ನು ಹರಡುತ್ತಿದ್ದಾರೆ; ಸಂತ್ರಸ್ತ ವಿದ್ಯಾರ್ಥಿನಿಯರ ಅಳಲು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

Prasthutha|

ಉಡುಪಿ: ಉಡುಪಿಯ ಬಾಲಕಿಯರ ಪದವಿಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ಪ್ರಾಯೋಗಿಕ ಪರೀಕ್ಷೆಗೆ ಅನುಮತಿ ನಿರಾಕರಿಸಲಾಗಿದ್ದು, ಕಾಲೇಜಿನ ಸಿಬ್ಬಂದಿ ದ್ವೇಷವನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿರುವ ಸಂತ್ರಸ್ತರ ಅಳಲು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

- Advertisement -

ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅನುಮತಿ ನೀಡುವಂತೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮೂವರು ವಿದ್ಯಾರ್ಥಿನಿಯರಿಗೆ ಪ್ರಾಯೋಗಿಕ ಪರೀಕ್ಷೆಗೆ ಕೂಡ ಅನುಮತಿ ನಿರಾಕರಿಸುವ ಮೂಲಕ ಆಡಳಿತ ಮಂಡಳಿ ಹೈಕೋರ್ಟ್ ಆದೇಶ ಉಲ್ಲಂಘಿಸಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಸದ್ಯ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿರುವ ಆರು ವಿದ್ಯಾರ್ಥಿನಿಯರ ಪೈಕಿ ಅರ್ಜಿದಾರರಾದ ಅಲಾಮಸ್ ಎ.ಎಚ್, ಹಾಝ್ರಾ ಶಿಫಾ ಮತ್ತು ಬೀಬಿ ಆಯಿಶಾ ಎಂಬವರಿಗೆ ಪ್ರಾಯೋಗಿಕ ಪರೀಕ್ಷೆಗೆ ಪ್ರವೇಶ ನಿರಾಕರಿಸಲಾಗಿದೆ.

- Advertisement -

ಈ ಕುರಿತು ಪ್ರತಿಕ್ರಿಯಿಸಿದ ಸಂತ್ರಸ್ತ ವಿದ್ಯಾರ್ಥಿಗಳು ಕಾಲೇಜಿನ ಸಿಬ್ಬಂದಿ ಮುಸ್ಲಿಮರ ವಿರುದ್ಧ ದ್ವೇಷವನ್ನು ಹರಡುತ್ತಿದ್ದಾರೆ ಎಂದು ಆರೋಪಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಾಲೇಜು ಕಂಪೌಂಡ್ ನಿಂದ ಹೊರಹೋಗುವಂತೆ ಪ್ರಾಂಶುಪಾಲರು ಸೂಚಿಸಿದ್ದಾರೆ. ಇದಕ್ಕೆ ಒಪ್ಪದಿದ್ದರೆ ಕಪಾಲಮೋಕ್ಷ ಮಾಡುವ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ ಎಂದು ಆರೋಪಿಸುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

ವಿಜ್ಞಾನ ವಿಭಾಗದ ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಲು ಹಿಜಾಬ್ ಧರಿಸಿ ಬಂದ ಮೂವರು ವಿದ್ಯಾರ್ಥಿಗಳನ್ನು ಹಿಜಾಬ್ ತೆಗೆದು ಪರೀಕ್ಷೆ ಬರೆಯುವಂತೆ ಪ್ರಾಂಶುಪಾಲರು ಸೂಚಿಸಿದ್ದು, ಇದನ್ನು ಸಂತ್ರಸ್ತ ವಿದ್ಯಾರ್ಥಿಗಳು ನಿರಾಕರಿಸಿದ್ದಾರೆ.

ಈ ವೇಳೆ ಪರಸ್ಪರ ವಾಗ್ವಾದ ನಡೆದು ಕಾಲೇಜು ಆವರಣದಿಂದ ಹೊರಹೋಗುವಂತೆ ಮತ್ತು ಇದಕ್ಕೆ ತಪ್ಪಿದ್ದಲ್ಲಿ ಪ್ರಕರಣ ದಾಖಲಿಸುವ ಕುರಿತು ಪ್ರಾಂಶುಪಾಲರು ಎಚ್ಚರಿಸಿದ್ದರು. ಇದರಿಂದ ಆಕ್ರೋಶಿತಗೊಂಡ ವಿದ್ಯಾರ್ಥಿಗಳು ಪ್ರಾಯೋಗಿಕ ಪರೀಕ್ಷೆಯನ್ನು ಮುಂದೂಡುವಂತೆ ಪದವಿಪೂರ್ವ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.



Join Whatsapp