ಬೆಂಗಳೂರು: ಒಂದು ನಿರ್ದಿಷ್ಟ ಧರ್ಮದ ಮೇಲೆ ನಂಬಿಕೆ ಇರಿಸಿರುವ ವ್ಯಕ್ತಿಗೆ ಬೇರೊಂದು ಧರ್ಮವನ್ನು ಕೀಳಾಗಿ ಕಾಣಲು ಯಾವುದೇ ಮೂಲಭೂತ ಹಕ್ಕು ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ತಿಳಿಸಿದೆ. ತಮ್ಮ ಧರ್ಮವನ್ನು ಪ್ರತಿಪಾದಿಸುವಾಗ ಆ ಧರ್ಮದ ವ್ಯಕ್ತಿಗಳು ಅಥವಾ ಮುಖಂಡರು ಇಲ್ಲವೇ ಪ್ರವಚನಕಾರರು ಇತರ ಧರ್ಮಗಳನ್ನು ಹೀಗಳೆಯಬಾರದು ಎಂದು ನ್ಯಾ. ಎಚ್ ಪಿ ಸಂದೇಶ್ ತಿಳಿಸಿದರು. ಆ ಮೂಲಕ ಬೇರೆ ಧರ್ಮಗಳನ್ನು ಅವಮಾನಿಸಿದ ಇಬ್ಬರು ಕ್ರೈಸ್ತ ಧರ್ಮೀಯರ ವಿರುದ್ಧದ ಕ್ರಿಮಿನಲ್ ಆಪಾದನೆ ರದ್ದುಗೊಳಿಸಲು ನಿರಾಕರಿಸಿದರು.
“ಆರೋಪಿಗಳು ನನ್ನ ಮನೆಗೆ ಬಂದು ಬೈಬಲ್ ಮಾತ್ರ ಭವಿಷ್ಯ ಹೇಳಬಲ್ಲದು. ಇತರೆ ಯಾವುದೇ ಧಾರ್ಮಿಕ ಗ್ರಂಥಗಳಿಗೆ ಇದು ಸಾಧ್ಯವಿಲ್ಲ. ಭವಿಷ್ಯದಲ್ಲಿ ಸುನಾಮಿ ಬರಲಿದೆ, ಯೇಸುಕ್ರಿಸ್ತ ಒಬ್ಬನೇ ಮನಸ್ಸಿಗೆ ಶಾಂತಿಕೊಡಬಲ್ಲ ಇತರೆ ಧರ್ಮಗಳಿಂದ ಅದು ಸಾಧ್ಯವಿಲ್ಲ ಭಗವದ್ಗೀತೆಯಾಗಲೀ ಅಥವಾ ಕುರಾನ್ ಆಗಲೀ ಮನಸ್ಸಿಗೆ ಶಾಂತಿ ನೀಡುವುದಿಲ್ಲ ಅಥವಾ ವ್ಯಕ್ತಿಗಳನ್ನು ರಕ್ಷಿಸುವುದಿಲ್ಲ ಎಂದಿದ್ದರು” ಎಂಬುದಾಗಿ ಮಹಿಳೆಯೊಬ್ಬರು ದೂರು ನೀಡಿದ್ದರು.
ಮಹಿಳೆಯ ದೂರನ್ನು ಆಧರಿಸಿ ಪೊಲೀಸರು ಐಪಿಸಿಯ ಸೆಕ್ಷನ್ 34 ಅನುಸರಣೆ ಸೆಕ್ಷನ್ 298 (ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಪದಗಳ ಉಚ್ಚರಣೆ) ಅಡಿಯಲ್ಲಿ ಆರೋಪಿಗಳು ಅಪರಾಧ ಎಸಗಿರುವುದಾಗಿ ಆರೋಪಪಟ್ಟಿ ಸಲ್ಲಿಸಿದ್ದರು. ಜೂನ್ 8, 2020ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಇದನ್ನು ಅಪರಾಧ ಎಂದು ಪರಿಗಣಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ರದ್ದುಪಡಿಸಬೇಕೆಂದು ಕೋರಿ ಆರೋಪಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸರ್ಕಾರದ ಕ್ರಮ ಸಂವಿಧಾನದ 14, 21 ಮತ್ತು 25 ನೇ ವಿಧಿಯಡಿ ದೊರೆತಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಆರೋಪಿಗಳು ವಾದಿಸಿದ್ದರು. ಘಟನೆ ನಡೆದ ಮೂರೂವರೆ ವರ್ಷಗಳ ನಂತರ ದೂರು ದಾಖಲಿಸಲಾಗಿದೆ ಎಂದು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದರು.