ಕಾಂಗ್ರೆಸ್, ಭಾರತ್ ಜೋಡೋ ಯಾತ್ರೆಯ ಟ್ವಿಟ್ಟರ್ ಖಾತೆ ನಿರ್ಬಂಧ ಆದೇಶ ರದ್ದುಗೊಳಿಸಿದ ಹೈಕೋರ್ಟ್

Prasthutha|

ಬೆಂಗಳೂರು: ಕಾಂಗ್ರೆಸ್, ಭಾರತ್ ಜೋಡೋ ಯಾತ್ರೆಯ ಟ್ವಿಟ್ಟರ್ ಖಾತೆಯನ್ನು ನಿರ್ಬಂಧಿಸುವಂತೆ ಸೂಚಿಸಿ ಸಿವಿಲ್ ನ್ಯಾಯಾಲಯ ನೀಡಿದ ಆದೇಶವನ್ನು ಪ್ರಶ್ನಿಸಿ ರಾಷ್ಟ್ರೀಯ ಕಾಂಗ್ರೆಸ್ ಸಲ್ಲಿಸಿದ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್ ಇಂದು ಅಂಗೀಕರಿಸಿದ್ದು, ಕೆಳ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ.

- Advertisement -

ನ್ಯಾಯಮೂರ್ತಿಗಳಾದ ಜಿ.ನರೇಂದರ್ ಮತ್ತು ಪಿ.ಎನ್.ದೇಸಾಯಿ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ರಾಷ್ಟ್ರೀಯ ಕಾಂಗ್ರೆಸ್ ಮತ್ತು ಭಾರತ್ ಜೋಡೋ ಯಾತ್ರೆಯ ಟ್ವಿಟ್ಟರ್ ಹ್ಯಾಂಡಲ್’ನಲ್ಲಿ ಕೆಜಿಎಫ್ ಫಿಲಂನ ಹಾಡಿನ ಕಾಪಿರೈಟ್ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಟ್ವಿಟ್ಟರ್ ಖಾತೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಸಿವಿಲ್ ನ್ಯಾಯಾಲಯ ಆದೇಶಿಸಿತ್ತು.

- Advertisement -

ಕೃತಿಸ್ವಾಮ್ಯ ಮಾಡಲಾದ ವಿಚಾರವನ್ನು ತಪ್ಪಾಗಿ ಟ್ವೀಟ್‌ ಮಾಡಲಾಗಿದ್ದು, ಆ ಟ್ವೀಟ್‌ ಗಳನ್ನು ನಾಳೆ ಮಧ್ಯಾಹ್ನ ತೆಗೆಯಲಾಗುವುದು ಎಂದು ಕಾಂಗ್ರೆಸ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಅಭಿಷೇಕ್ಮನು ಸಿಂಘ್ವಿ ಅವರು ನೀಡಿದ ಭರವಸೆಯನ್ನು ದಾಖಲಿಸಿಕೊಂಡು ಪೀಠವು ಆದೇಶ ಮಾಡಿತು.

ಭರವಸೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಟ್ವಿಟರ್‌ ಖಾತೆ ನಿರ್ಬಂಧಿಸುವ ಅಗತ್ಯವಿಲ್ಲ ಎಂದು ಪೀಠ ಹೇಳಿತು. “ಖಾತೆ ನಿರ್ಬಂಧ ಕ್ರಮವು ದಂಡ ಸ್ವರೂಪದ್ದಾಗಿದೆ. ಸಾಕ್ಷ್ಯ ಸಂಗ್ರಹಿಸಲು ನಿರ್ದೇಶಿಸಿರುವುದು ಸರಿಯಾಗಿದೆ” ಎಂದು ಪೀಠವು ಅಭಿಪ್ರಾಯ ವ್ಯಕ್ತಪಡಿಸಿತು.

“ಕಾಂಗ್ರೆಸ್‌ ಭರವಸೆಗೆ ಒಳಪಟ್ಟು ಸದ್ಯಕ್ಕೆ ವಾಣಿಜ್ಯ ನ್ಯಾಯಾಲಯದ ಆದೇಶವನ್ನು ಬದಿಗೆ ಸರಿಸಲಾಗಿದೆ. ಇತರೆ ಮಧ್ಯಂತರ ಅರ್ಜಿಗಳನ್ನು ಪುನಃ ಪರಿಗಣಿಸಲಾಗುವುದು” ಎಂದು ಪೀಠವು ಆದೇಶದಲ್ಲಿ ಸ್ಪಷ್ಟಪಡಿಸಿತು.

ಅಧೀನ ನ್ಯಾಯಾಲಯವು “ಕೆಜಿಎಫ್‌ – 2 ಸಿನಿಮಾದ ಮುದ್ರಿತ ಸಂಗೀತವನ್ನು ಕಾನೂನುಬಾಹಿರವಾಗಿ ಕಾಂಗ್ರೆಸ್‌ ಮತ್ತು ಭಾರತ ಐಕ್ಯತಾ ಯಾತ್ರೆಯಲ್ಲಿ ಬಳಕೆ ಮಾಡಿರುವುದಕ್ಕೆ ಪ್ರೋತ್ಸಾಹ ನೀಡಿದರೆ ಫಿರ್ಯಾದಿಗೆ ಸರಿಪಡಿಸಲಾರದಷ್ಟು ಹಾನಿಯಾಗಲಿದೆ. ವಿಸ್ತೃತ ನೆಲೆಯಲ್ಲಿ ಇದು ಕೃತಿಚೌರ್ಯಕ್ಕೆ ಬೆಂಬಲ ನೀಡಿದಂತಾಗುತ್ತದೆ” ಎಂದು ತನ್ನ ಆದೇಶದಲ್ಲಿ ಹೇಳಿತ್ತು.

ಈ ಹಿನ್ನೆಲೆಯಲ್ಲಿ ಏಕಪಕ್ಷೀಯವಾಗಿ ಪ್ರತಿಬಂಧಕಾದೇಶ ಮಾಡಿದ್ದ ಅಧೀನ ನ್ಯಾಯಾಲಯವು ಫಿರ್ಯಾದಿಯು ಕೃತಿಸ್ವಾಮ್ಯ ಹೊಂದಿರುವ ಮುದ್ರಿತ ಸಂಗೀತವನ್ನು ಅನಧಿಕೃತವಾಗಿ ಮತ್ತು ಕಾನೂನುಬಾಹಿರವಾಗಿ ಪ್ರತಿವಾದಿಗಳು ಬಳಕೆ ಮಾಡಬಾರದು ಎಂದು ನಿರ್ಬಂಧಿಸಿತ್ತು. ಅಲ್ಲದೇ, ಕೃತಿ ಸ್ವಾಮ್ಯ ಉಲ್ಲಂಘಿಸಿರುವ ಮೂರು ಲಿಂಕ್‌ಗಳನ್ನು ತನ್ನ ವೇದಿಕೆಯಿಂದ ತೆಗೆಯುವಂತೆ ಟ್ವಿಟರ್‌ಗೆ ಆದೇಶಿಸಿ, ಐಎನ್‌ಸಿ ಮತ್ತು ಭಾರತ ಐಕ್ಯತಾ ಯಾತ್ರೆಯ ಟ್ವಿಟರ್‌ ಖಾತೆಗಳನ್ನು ನಿರ್ಬಂಧಿಸುವಂತೆ ಆದೇಶ ಮಾಡಿತ್ತು.

(ಕೃಪೆ: ಬಾರ್ & ಬೆಂಚ್)



Join Whatsapp