ಕೋವಿಡ್ ನಿಯಮ ಉಲ್ಲಂಘಿಸಿ ಸಿಎಂ ಪುತ್ರನ ದೇಗುಲ ಭೇಟಿ ವಿಚಾರ; ಸರಕಾರಕ್ಕೆ ಹೈಕೋರ್ಟ್ ತರಾಟೆ

Prasthutha|

ಬೆಂಗಳೂರು: ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಅವರನ್ನು ವಿಶೇಷವಾಗಿ ನಡೆಸಿಕೊಂಡದ್ದಕ್ಕಾಗಿ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು ರಾಜಕೀಯ ನಾಯಕರಿಗೆ ಒಂದು ನಿಯಮ ಪ್ರಜೆಗಳಿಗೆ ಇನ್ನೊಂದು ನಿಯಮ ಇರಲು ಸಾಧ್ಯವಿಲ್ಲ ಎಂದಿದೆ.

- Advertisement -

ಕೋವಿಡ್‌ ಲಾಕ್‌ಡೌನ್‌ ಜಾರಿಯಲ್ಲಿದ್ದರೂ ಮುಖ್ಯಮಂತ್ರಿ ಪುತ್ರ ವಿಜಯೇಂದ್ರ ಮೇ 18ರಂದು ಮೈಸೂರು ಜಿಲ್ಲೆಯ ನಂಜನಗೂಡು ದೇಗುಲಕ್ಕೆ ಭೇಟಿ ನೀಡಿದ್ದರು. ಘಟನೆಗೆ ಸಂಬಂಧಿಸಿದಂತೆ ವಕೀಲ ಜಿಆರ್‌ ಮೋಹನ್‌ ನ್ಯಾಯಾಲಯಕ್ಕೆ ಜ್ಞಾಪನಾ ಪತ್ರ ಸಲ್ಲಿಸಿದ್ದರು. ಇತರೆ ನಾಗರಿಕರು ಲಾಕ್‌ಡೌನ್‌ ನಿರ್ಬಂಧಗಳನ್ನು ಪಾಲಿಸುತ್ತಿದ್ದಾಗ ವಿಜಯೇಂದ್ರ ಅವರ ಪ್ರಯಾಣ ಸಂವಿಧಾನದ 14 ನೇ ವಿಧಿಯ ಉಲ್ಲಂಘನೆಯಾಗಿದ್ದು ಇತರೆ ನಾಗರಿಕರು ಲಾಕ್‌ಡೌನ್‌ ನಿರ್ಬಂಧಗಳನ್ನು ಪಾಲಿಸಬೇಕಿತ್ತು ಎಂದು ವಿವರಿಸಿದ್ದರು.

ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ನೇತೃತ್ವದ ವಿಭಾಗೀಯ ಪೀಠ, “ ಪ್ರಸ್ತುತ ಜಾರಿಯಲ್ಲಿರುವ ಕೋವಿಡ್ ನಿಯಮ ಎಲ್ಲಾ ನಾಗರಿಕರಿಗೂ ಅನ್ವಯವಾಗಬೇಕು. ಅದನ್ನು ನೀವು ಯಾರೋ ಒಬ್ಬರಿಗೆ ಅನ್ವಯಿಸಲಾಗದು” ಎಂದು ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವಡಗಿಗೆ ಪೀಠವು ತಿಳಿಸಿತು.

- Advertisement -

ಇದಕ್ಕೆ ಪ್ರತಿಕ್ರಿಯಸಿದ ಎಜಿ ನಾವಡಗಿ “ವಿಜಯೇಂದ್ರ ಅಧಿಕೃತ ಕೋವಿಡ್‌ ಕರ್ತವ್ಯದ ಮೇರೆಗೆ ದೇಗುಲಕ್ಕೆ ಭೇಟಿ ನೀಡಿದ್ದರು” ಎಂದು ಮಾಹಿತಿ ನೀಡಿದರು. ಆದರೆ ಇದನ್ನು ಒಪ್ಪದ ನ್ಯಾಯಾಲಯ “ಕೋವಿಡ್‌ ಕೆಲಸಕ್ಕಾಗಿ ದೇಗುಲಕ್ಕೆ ಹೋಗಬೇಕಿರಲಿಲ್ಲ. ಜನರಿಗೆ ಈಗ ದೇಗುಲ ಪ್ರವೇಶಿಸಲು ಅನುಮತಿ ಇದೆಯೇ?” ಎಂದು ಮರುಪ್ರಶ್ನಿಸಿತು.

ಅಲ್ಲದೇ, “ಇದು ತಪ್ಪು ಸಂದೇಶ ನೀಡುತ್ತದೆ ಎಂದು ನಾವು ಹೇಳುತ್ತಿದ್ದೇವೆ” ಎಂದಿತು. ಅರ್ಜಿದಾರರಾದ ವಕೀಲ ಜಿಆರ್‌ ಮೋಹನ್‌ 2018ರಲ್ಲಿ ತೆಗೆದ ಛಾಯಾಚಿತ್ರವನ್ನು ಲಗತ್ತಿಸಿದ್ದಾರೆ ಎಂದು ಇದೇ ವೇಳೆ ನಾವಡಗಿ ತಿಳಿಸಿದರು.

ಪ್ರಕರಣದ ಪ್ರಾಥಮಿಕ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿ ಅವರ ವರದಿಯನ್ನು ನ್ಯಾಯಾಯಲಯಕ್ಕೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಪೀಠ ನಿರ್ದೇಶಿಸಿತು. ಬಳಿಕ, ಜೂನ್ 18 ಕ್ಕೆ ವಿಚಾರಣೆಯನ್ನು ಮುಂದೂಡಿತು.



Join Whatsapp