ಬೆಂಗಳೂರು: ರಾಜಕೀಯ ದ್ವೇಷದಿಂದ ಅತಿ ಹೆಚ್ಚು ಹತ್ಯೆಗಳಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್, ಅನೈತಿಕ ಸಂಬಂಧ, ಲಾಭ ಮತ್ತು ರಾಜಕೀಯ ದ್ವೇಷ ಈ ಮೂರರಲ್ಲಿ ಯಾವುದಾದರೂ ಒಂದು ಕಾರಣಕ್ಕೆ ಹೆಚ್ಚು ಕೊಲೆಗಳಾಗುತ್ತವೆ ಎಂದು ಹೇಳಿದೆ.
ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಗ್ರಾಮ ಪಂಚಾಯತಿ ಸದಸ್ಯರೊಬ್ಬರು ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ನೇತೃತ್ವದ ಏಕಸದಸ್ಯ ಪೀಠವು, ಕೊಲೆಗಳು ನಡೆಯುವುದೇ ಮೂರು ಕಾರಣಗಳಿಗೆ. ಒಂದು ಅನೈತಿಕ ಸಂಬಂಧ ಹೊಂದಿರುವುದಕ್ಕೆ, ಮತ್ತೊಂದು ಯಾವುದಾದರೂ ಲಾಭಕ್ಕಾಗಿ, ಮೂರನೆಯದು ರಾಜಕೀಯ ದ್ವೇಷಕ್ಕೆ. ಅದರಲ್ಲೂ ರಾಜಕೀಯ ದ್ವೇಷದಿಂದ ಅತಿ ಹೆಚ್ಚು ಹತ್ಯೆಗಳಾಗುತ್ತಿವೆ. ಈ ಕಾರಣಗಳಿಲ್ಲದಿದ್ದರೆ ಹತ್ಯೆಗಳು ನಡೆಯುವುದಿಲ್ಲ” ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ಬಗ್ಗೆ ವಿಶ್ಲೇಷಣೆ ನೀಡಿದ ನ್ಯಾ. ಶ್ರೀಶಾನಂದ, ತನ್ನ ರಾಜಕೀಯ ಬೆಳವಣಿಗೆಗೆ ತೊಡಕಾಗಿರುವವರನ್ನು, ಹತ್ಯೆಗೈದರೆ ಎಲ್ಲವೂ ಸರಿಯಾಗುತ್ತದೆ ಎಂಬ ಭಾವನೆ ಮೂಡಿದರೆ ಸಾಕು; ಕೊಲೆಗಳು ನಡೆಯುತ್ತವೆ. ಹತ್ಯೆಗೈದು ಜೈಲಿಗೆ ಹೋಗಿ ಹೊರಬಂದ ಆರೋಪಿ ತನಗೇನೂ ಆಗಲಿಲ್ಲ ಎಂಬಂತೆ ನಡೆದುಕೊಳ್ಳುತ್ತಿರುತ್ತಾನೆ. ನ್ಯಾಯಾಲಯ ಜಾಮೀನು ನೀಡಿದರೆ ನ್ಯಾಯಾಂಗದ ಮೇಲೆ ನಂಬಿಕೆಯಿದೆ ಎನ್ನುತ್ತಾರೆ. ಜಾಮೀನು ಸಿಗದಿದ್ದರೆ ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ ಎಂದು ಆರೋಪಿಸುತ್ತಾರೆ ಎಂದು ವ್ಯಂಗ್ಯ ಮಾಡಿದರು.