ಅಮಿತ್ ಶಾ ರ‍್ಯಾಲಿಯಲ್ಲಿ ಸಾಮಾಜಿಕ ಅಂತರ ನಿಯಮ ಉಲ್ಲಂಘನೆಗೆ FIR ದಾಖಲು ಮಾಡಿಲ್ಲ ಯಾಕೆ? ಬೆಳಗಾವಿ ಪೊಲೀಸ್ ಆಯುಕ್ತರಿಗೆ ಹೈಕೋರ್ಟ್‌ ಪ್ರಶ್ನೆ

Prasthutha|

ಭಾರತೀಯ ಜನತಾ ಪಕ್ಷವು ಜನವರಿ 17ರಂದು ಬೆಳಗಾವಿಯಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಭಾಗವಹಿಸಿದ್ದವರ ವಿರುದ್ಧ ಎಫ್‌ಐಆರ್‌ ದಾಖಲಿಸದ ಪೊಲೀಸ್‌ ಆಯುಕ್ತರನ್ನು ಹೈಕೋರ್ಟ್‌ ಮಂಗಳವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೇತೃತ್ವದಲ್ಲಿ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಬಿಜೆಪಿಯು ಜನವರಿ 17ರಂದು ಸಮಾವೇಶ ಆಯೋಜಿಸಿತ್ತು. ಸಾಮಾಜಿಕ ಅಂತರ ನಿಯಮಗಳನ್ನು ಉಲ್ಲಂಘಿಸಿ ಸಾವಿರಾರು ಜನರು ಸಮಾವೇಶದಲ್ಲಿ ಭಾಗವಹಿಸಿದ್ದರು ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗಿತ್ತು.

- Advertisement -

ಪ್ರಕರಣವನ್ನು ಸಲೀಸಾಗಿ ತೆಗೆದುಕೊಂಡಿರುವ ಪೊಲೀಸ್‌ ಆಯುಕ್ತರನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ಸೂರಜ್‌ ಗೋವಿಂದರಾಜ್‌ ಅವರಿದ್ದ ಪೀಠವು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಅಧಿಕಾರಿ ಸಲ್ಲಿಸಿರುವ ಅಫಿಡವಿಟ್‌ ಅಜ್ಞಾನದಿಂದ ಕೂಡಿದೆ ಎಂದು ಪೀಠ ಹೇಳಿದೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮತ್ತು ಮಾಸ್ಕ್‌ ಧರಿಸದೇ ಜನವರಿ 17ರಂದು ಅಪಾರ ಸಂಖ್ಯೆಯಲ್ಲಿ ಜನರು ಸೇರಿರುವುದು ಚಿತ್ರಗಳಿಂದ ತಿಳಿದುಬರುತ್ತದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಒಂದೇ ಒಂದು ಎಫ್‌ಐಆರ್‌ ದಾಖಲಿಸದಿರುವುದರ ಕುರಿತು ಆಯುಕ್ತರು ಅಫಿಡವಿಟ್‌ನಲ್ಲಿ ಉಲ್ಲೇಖಿಸಿಲ್ಲ. ಆಯುಕ್ತರ ಅಫಿಡವಿಟ್‌ ಓದಿದಾಗ ಅವರು ಪ್ರಕರಣವನ್ನು ಉಪೇಕ್ಷಿಸಿದ್ದಾರೆ ಎಂಬುದು ತಿಳಿಯುತ್ತದೆ. ಮಾಸ್ಕ್‌ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮಗಳನ್ನು ಗಾಳಿಗೆ ತೂರಿ ಅಪಾರ ಸಂಖ್ಯೆಯ ಜನರು ಬೆಳಗಾವಿಯಲ್ಲಿ ನೆರದಿದ್ದರು. 20,900 ರೂಪಾಯಿ ದಂಡ ವಸೂಲಿ ಮಾಡುವ ಮೂಲಕ ಆಯುಕ್ತರು ಸಂತುಷ್ಟರಾದಂತಿದೆ. ಕಾಯಿದೆಯ ನಿಯಮಗಳ ಅನ್ವಯ ರೂಪಿಸಲಾದ ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕೆ ಏಕೆ ಎಫ್‌ಐಆರ್‌ಗಳನ್ನು ದಾಖಲಿಸಲಾಗಿಲ್ಲ ಎಂಬುದಕ್ಕೆ ವಿವರಣೆ ನೀಡುವಂತೆ ನಾವು ಆಯುಕ್ತರಿಗೆ ನಿರ್ದೇಶಿಸುತ್ತಿದ್ದೇವೆ” ಎಂದು ಪೀಠವು ಆದೇಶದಲ್ಲಿ ತಿಳಿಸಿದೆ.

Join Whatsapp