ಟ್ವಿಟ್ಟರ್ ಮುಖ್ಯಸ್ಥರಿಗೆ ಯುಪಿ ಪೊಲೀಸರು ನೀಡಿದ್ದ ನೋಟಿಸ್ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್

Prasthutha|

ಬೆಂಗಳೂರು, ಜುಲೈ 23 : ಉತ್ತರ ಪ್ರದೇಶದ ಗಾಝಿಯಾಬಾದ್ ನ ಲೋನಿಯಲ್ಲಿ ಮುಸ್ಲಿಮ್ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟ್ಟರ್ ಇಂಡಿಯಾದ ವ್ಯಸಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿಯವರಿಗೆ ಉತ್ತರ ಪ್ರದೇಶ ಪೊಲೀಸರು ನೀಡಿದ ನೋಟಿಸ್ ಅನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ರದ್ದುಪಡಿಸಿ ಆದೇಶ ನೀಡಿದೆ.

- Advertisement -


ಕೋಡ್ ಆಫ್ ಕ್ರಿಮಿನಲ್ ಪ್ರೊಸೀಜರ್ (ಸಿ.ಆರ್.ಪಿ.ಸಿ) ಯ ಸೆಕ್ಷನ್ 41 ಎ ಅಡಿಯಲ್ಲಿ ನೋಟಿಸ್ ನೀಡಲಾಗಿತ್ತು. ಯುಪಿ ಪೊಲೀಸರ ತಡೆ ನೀಡುವಂತೆ ಕೋರಿ ಕರ್ನಾಟಕ ಹೈಕೋರ್ಟ್ ಗೆ ಸಲ್ಲಿಸಿದ ಮನೀಶ್ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಾಲಯ, ಸಿಆರ್ ಪಿಸಿ ಸೆಕ್ಷನ್ 160ರ ಅಡಿ ಮೊದಲಿಗೆ ನೀಡಿದ್ದ ನೋಟಿಸ್ ಗೆ ಮಹೇಶ್ವರಿ ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ಅವರನ್ನು ಬೆದರಿಸುವ ತಂತ್ರದ ಭಾಗವಾಗಿ ಸೆಕ್ಷನ್ 41ಎ ಅಡಿ ನೋಟಿಸ್ ನೀಡಲಾಗಿದೆ ಎಂದು ನ್ಯಾಯಮೂರ್ತಿ ಜಿ ನರೇಂದರ್ ನೇತೃತ್ವದ ಏಕಸದಸ್ಯ ಪೀಠವು ಅಭಿಪ್ರಾಯಪಟ್ಟಿದೆ.


“ಕಿರುಕುಳ ನೀಡಲು ಶಾಸನದ ನಿಬಂಧನೆಗಳನ್ನು ಅಸ್ತ್ರ ಮಾಡಿಕೊಳ್ಳಲು ಅನುಮತಿಸಲಾಗದು. ಕನಿಷ್ಠ ಪಕ್ಷ ಮೇಲ್ನೋಟಕ್ಕಾದರೂ ಅರ್ಜಿದಾರರು (ಮಹೇಶ್ವರಿ) ನೀವು ಮಾಡಿದ ಆರೋಪದಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ತೋರ್ಪಡಿಸಲು ಅಗತ್ಯವಾದ ದಾಖಲೆಗಳನ್ನು ಉತ್ತರ ಪ್ರದೇಶ ಪೊಲೀಸರು ಪೀಠದ ಮುಂದೆ ಇಟ್ಟಿಲ್ಲ” ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.
ಕಳೆದ ತಿಂಗಳು ಗಾಝಿಯಾಬಾದ್ ನ ಲೋನಿಯಲ್ಲಿ ಮುಸ್ಲಿಂ ವೃದ್ಧನ ಮೇಲೆ ಹಲ್ಲೆ ಕುರಿತ ವೀಡಿಯೊಗೆ ಸಂಬಂಧಿಸಿದ ದೂರಿನ ವಿಚಾರಣೆಗೆ ಹಾಜರಾಗುವಂತೆ ಲೋನಿ ಗಡಿ ಪೊಲೀಸ್ ಠಾಣೆ ಪೊಲೀಸರು ಟ್ವಿಟ್ಟರ್ ನಿರ್ದೇಶಕ ಮನೀಶ್ ಮಹೇಶ್ವರಿಗೆ ನೋಟಿಸ್ ಜಾರಿಗೊಳಿಸಿದ್ದರು. ಲೋನಿಗಡಿ ಪೊಲೀಸ್ ಠಾಣೆಗೆ ಬಂದು ಒಂದು ವಾರದೊಳಗೆ ಹೇಳಿಕೆಯನ್ನು ದಾಖಲಿಸುವಂತೆ ಮನೀಶ್ ರವರಿಗೆ ನೋಟಿಸ್ ನಲ್ಲಿ ತಿಳಿಸಲಾಗಿತ್ತು. ಟ್ವಿಟ್ಟರ್ ಅಧಿಕಾರಿಯೊಬ್ಬರು ಈ ಹಿಂದೆ ವಿಡಿಯೋ – ಕಾನ್ಫರೆನ್ಸ್ ಮೂಲಕ ಪೊಲೀಸ್ ವಿಚಾರಣೆಗೆ ಸಹಕರಿಸುವುದಾಗಿ ತಿಳಿಸಿದ್ದರು. ಟ್ವಿಟ್ಟರ್ ಅಧಿಕಾರಿಯ ಮನವಿಯನ್ನು ತಿರಸ್ಕರಿಸಿದ್ದ ಪೊಲೀಸರು ಠಾಣೆಗೆ ಖುದ್ದಾಗಿ ಹಾಜರಾಗುವಂತೆ ತಿಳಿಸಿದ್ದರು.



Join Whatsapp