ಬೆಂಗಳೂರು: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ಪೂರ್ಣ ಪೀಠವು ಹಿಜಾಬ್ ನಿಷೇಧ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಬುಧವಾರ ಕೂಡ ಮುಂದುವರಿಸಿ, ವಾದ ವಿವಾದ ಆಲಿಸಿದ ಬಳಿಕ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
ಅರ್ಜಿದಾರರ ಪರ ವಕೀಲ ಕುಮಾರ್ ಅವರು ವಾದ ಮಂಡಿಸಿ, ಹಿಜಾಬ್ ಅನ್ನು ಕೇವಲ ಮುಸ್ಲಿಮರು ಮಾತ್ರವೇ ಧರಿಸುತ್ತಾರೆ. ಗೂಂಗಟ್ ಧರಿಸಲು ಅನುಮತಿ ಇದೆ, ಬಳೆ ಧರಿಸಲು ಅನುಮತಿ ಇದೆ. ಕ್ರಿಶ್ಚಿಯನ್ನರ ಶಿಲುಬೆಗೇಕೆ ನಿಷೇಧವಿಲ್ಲ? ಸಿಖ್ಖರ ಪಗಡಿಗೇಕೆ ನಿಷೇಧವಿಲ್ಲ?
ಸಂವಿಧಾದನ 15ನೇ ವಿಧಿಯ ಪ್ರಕಾರ ಧರ್ಮ, ಜನಾಂಗ, ಜಾತಿ, ಲಿಂಗ, ಜನ್ಮ ಸ್ಥಳ ಆಧರಿಸಿ ರಾಜ್ಯವು ಯಾವುದೇ ನಾಗರಿಕರ ವಿರುದ್ಧ ತಾರತಮ್ಯ ಮಾಡಬಾರದು. ಈ ಪ್ರಕರಣದಲ್ಲಿ ನನ್ನ ಧರ್ಮದ ಕಾರಣಕ್ಕೆ ತಾರತಮ್ಯ ಮಾಡಲಾಗುತ್ತಿದೆ. ದಕ್ಷಿಣ ಭಾರತದಲ್ಲಿ ನಮಗೆ ಧಾರ್ಮಿಕ ಸಂಕೇತಗಳ ಬಗ್ಗೆ ಹೆಚ್ಚು ಒಲವು. ಯಾವುದೇ ಸ್ಥಳಕ್ಕೆ ಹೋದರೂ ವಿಶೇಷವಾಗಿ ಸಾರ್ವಜನಿಕ ಸ್ಥಳಗಳಿಗೆ ಹೋದಾಗ, ನಮ್ಮ ಶಿಕ್ಷಕರೂ ಧಾರ್ಮಿಕ ಸಂಕೇತಗಳನ್ನು ಬಿಂಬಿಸುವ ಉಡುಪು ಹಾಕುತ್ತಾರೆ ಎಂದು ಹೇಳಿದರು.