ಬೆಂಗಳೂರು: ವಿಧಾನಸಭಾ ಚುನಾವಣೆ ಮುನ್ನ ಕರ್ನಾಟಕದಲ್ಲಿ ಭಾರೀ ಸದ್ದು ಮಾಡಿದ್ದ ಬಿಜೆಪಿ ಸರಕಾರದ 40 ಪರ್ಸೆಂಟ್ ಕಮಿಷನ್ ಆರೋಪವನ್ನು ಇದೀಗ ಸಿದ್ದರಾಮಯ್ಯ ಸರ್ಕಾರ ನ್ಯಾಯಾಂಗ ತನಿಖೆಗೆ ವಹಿಸಿದೆ. ರಾಜ್ಯ ಗುತ್ತಿಗೆದಾರರ ಸಂಘದ ಕೆಂಪಣ್ಣ ಮಾಡಿದ್ದ ಕಮಿಷನ್ ಆರೋಪದ ತನಿಖೆಯನ್ನು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್ಎನ್ ನಾಗಮೋಹನ್ ದಾಸ್ ನೇತೃತ್ವದಲ್ಲಿ ಸಮಿತಿ ರಚಿಸಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದ ಅಗತ್ಯ ಕಡತ, ದಾಖಲೆಗಳನ್ನು ಆಯಾ ಇಲಾಖೆಯ ಅಧಿಕಾರಿಗಳು ಈ ತನಿಖಾ ಸಮಿತಿಗೆ ನೀಡಬೇಕು. ಹಾಗೇ ಸ್ಥಳ ಪರಿಶೀಲನೆ ವೇಳೆ ಖುದ್ದು ಹಾಜರಿದ್ದು, ತನಿಖೆಗೆ ಸಹಕಾರ ನೀಡಬೇಕೆಂದು ಹೇಳಿದೆ. ಹಾಗೇ ತನಿಖೆಗೆ ಸಂಬಂಧಿಸಿದಂತೆ ಸಹಾಯಕ್ಕೆ ಅಗತ್ಯವಿರುವ ತಾಂತ್ರಿಕ ಸಲಹೆಗಾರರು, ಆರ್ಥಿಕ ಸಲಹೆಗಾರರು ಹಾಗೂ ಆಡಳಿತಾತ್ಮಕ ಸಲಹೆಗಾರರನ್ನು ತೆಗೆದುಕೊಳ್ಳಬಹುದು ಎಂದು ಸಮಿತಿಗೆ ಆದೇಶದಲ್ಲಿ ತಿಳಿಸಿದೆ.
ಈ ಸಮಿತಿಯು ಸ್ಥಳ ಹಾಗೂ ದಾಖಲಾತಿಗಳನ್ನು ಪರಿಶೀಲಿಸಿ ವಿವರವಾದ ತನಿಖೆ ನಡೆಸಿ, ಲೋಪದೋಷಗಳ ಮಾಹಿತಿ ಹಾಗೂ ಕಾರಣರಾದ ಆರೋಪಿಗಳನ್ನು ಪತ್ತೆ ಮಾಡಿ ಸಂಪೂರ್ಣ ವರದಿಯನ್ನು ಸೂಕ್ತ ಶಿಫಾರಸ್ಸಿನೊಂದಿಗೆ ಒಂದು ತಿಂಗಳ ಒಳಗೆ ನೀಡಬೇಕೆಂದು ಆದೇಶದಲ್ಲಿ ಸೂಚಿಸಿದೆ.