ಮಂಗಳೂರು ನೆಹರೂ ಮೈದಾನದ ಹೆಸರು ಕೈ ಬಿಟ್ಟ ಕರ್ನಾಟಕ ಸರಕಾರ: ದೇಶದ ಪ್ರಥಮ ಪ್ರಧಾನಿಗೆ ಸಾಹಿತ್ಯ ಅಕಾಡಮಿಯಿಂದ ಅಗೌರವ

Prasthutha|

ಮಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ಇತ್ತೀಚಿಗೆ ಹೊರತಂದಿರುವ ‘ಸ್ವಾತಂತ್ರ ಹೋರಾಟದಲ್ಲಿ ಕರ್ನಾಟಕ ಕೇಂದ್ರ ಮೈದಾನ ‘ ಎಂಬ ಪುಸ್ತಕದಲ್ಲಿ ಮಂಗಳೂರು ನೆಹರೂ ಮೈದಾನವನ್ನು ಕೇಂದ್ರಮೈದಾನ ಎಂದು ಉಲ್ಲೇಖಿಸಿದ್ದು ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

- Advertisement -

ಪಠ್ಯ ಪರಿಷ್ಕರಣೆ ವಿವಾದವು ರಾಜ್ಯಾದ್ಯಂತ ಭುಗಿಲೆದ್ದ ಮಧ್ಯೆಯೇ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತೊಂದು ಎಡವಟ್ಟು ಮಾಡಿದ್ದು, ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಅಧೀನದಲ್ಲಿ ಹೊರ ತಂದಿರುವ ಕೃತಿಯಲ್ಲಿ ಉದ್ದೇಶಪೂರ್ವಕವಾಗಿ ಭಾರತದ ಪ್ರಥಮ ಪ್ರಧಾನಿಯ ಹೆಸರನ್ನು ಕೈಬಿಡಲಾಗಿದೆ.

ನೆಹರೂ ಮೈದಾನದಲ್ಲಿ 1941ರಲ್ಲಿ ಸ್ವಾತಂತ್ರ ಆಂದೋಲನದ ಹಲವು ಸಭೆಗಳು ಮತ್ತು ಪ್ರತಿಭಟನೆಗಳು ನಡೆದಿದ್ದು, 1937ರಲ್ಲಿ ಪಂಡಿತ್ ನೆಹರೂ ರವರು ಈ ಮೈದಾನದಲ್ಲಿ ಸ್ವಾತಂತ್ರ ಹೋರಾಟಗಾರರನ್ನು ಮತ್ತು ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಈ ಕಾರಣದಿಂದ 1966ರಲ್ಲಿ ಈ ಮೈದಾನಕ್ಕೆ ನೆಹರೂ ಮೈದಾನ ಎಂದು ನಾಮಕರಣ ಮಾಡಲಾಗಿತ್ತು. ಮತ್ತು 2016ಕ್ಕೆ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ನೆಹರೂ ಪ್ರತಿಮೆಯನ್ನು ಈ ಮೈದಾನದಲ್ಲಿ ಸ್ಥಾಪಿಸಿತು.

- Advertisement -

ಬಿಜೆಪಿಯು ನಿರಂತರವಾಗಿ ನೆಹರೂರವರ ಹೆಸರಿಗೆ ಮಸಿ ಬಳಿಯುವ ಮತ್ತು ಇತಿಹಾಸವನ್ನು ತಿರುಚುವ ಉದ್ದೇಶದಿಂದ ಆಗಿಂದಾಗೆ ಇದನ್ನು ಕೇಂದ್ರ ಮೈದಾನವೆಂದು ಕರೆಯಲು ಪ್ರಯತ್ನಿಸಿದೆ.ಇದಕ್ಕೆ ಪೂರಕವಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕೂಡ ಇದೇ ದಾರಿಯಲ್ಲಿ ಮುಂದುವರಿದಿದೆ.

ಸರಕಾರದ ಯಾವುದೇ ಅಧಿಕೃತ ಸಂಸ್ಥೆಯು, ಇತಿಹಾಸದಲ್ಲಿ ಇದ್ದಂತೆ ಕೆಲಸ ಮಾಡಬೇಕೆ ಹೊರತು ರಾಜಕೀಯಕ್ಕೆ ಮಣಿದು ಇತಿಹಾಸವನ್ನು ತಿರುಚುವ ಕೆಲಸ ಯಾವತ್ತೂ ಮಾಡಬಾರದು. ಆದರೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು ನೆಹರೂ ಮೈದಾನ ಎಂಬ ಹೆಸರನ್ನು ಪುಸ್ತಕದಲ್ಲಿ ಪ್ರಕಟಿಸದೆ ವಿಕೃತ ಮನಸ್ಥಿತಿ ತೋರಿದೆ.



Join Whatsapp