ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಸುಮಾರು ರೂ.7885.32 ಕೋಟಿ ಹಣವನ್ನು ರಾಜ್ಯ ಸರ್ಕಾರ ಇತರೆ ಕಾಮಗಾರಿಗಳಿಗಾಗಿ ಬಳಸಿರುವ ಅಂಶ ಬೆಳಕಿಗೆ ಬಂದಿದೆ.
ಎಸ್ ಪಿ-ಟಿಎಸ್ ಪಿ ಕಾಯ್ದೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ವರ್ಷದಲ್ಲಿ ಇಂತಿಷ್ಟು ಹಣ ಮೀಸಲಿಟ್ಟು ಅವರಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗಾಗಿ ಅದನ್ನು ಬಳಸಬೇಕು ಎಂಬ ನಿಮಯವಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಈ ಕಾಯ್ದೆಯನ್ನು ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಜಾರಿಗೆ ತಂದಿದ್ದರು.
ಎಸ್ ಸಿ, ಎಸ್ ಟಿಗಳ ಹಣ ಅವರ ಕಲ್ಯಾಣ ಹಾಗೂ ಅಭಿವೃದ್ಧಿಗಾಗಿ ಮಾತ್ರ ಬಳಕೆಯಾಗಬೇಕಿತ್ತು. ಆದರೆ 2018 ಹಾಗೂ 2021 ರ ನಡುವೆ ನೀರಾವರಿ, ನಗರಾಭಿವೃದ್ಧಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳು ವಿವಿಧ ಯೋಜನೆಗಳಿಗಾಗಿ ಎಸ್ ಸಿಎಸ್ ಪಿ-ಟಿಎಸ್ ಪಿ ಹಣವನ್ನು ಖರ್ಚು ಮಾಡಲಾಗಿದ್ದು, ಇದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಎಸ್ಸಿ/ಎಸ್ಟಿ ಕಲ್ಯಾಣಕ್ಕಾಗಿ ಬಳಸಬೇಕಾದ ಕರ್ನಾಟಕ ಪರಿಶಿಷ್ಟ ಜಾತಿಗಳ ಉಪಯೋಜನೆ ಹಾಗೂ ಬುಡಕಟ್ಟು ಉಪಯೋಜನೆ ಹಣವನ್ನು ಕುಡಿಯುವ ನೀರಿನ ನೀರಿನ ಯೋಜನೆಗಳು, ಚರಂಡಿ ದುರಸ್ತಿ, ನೀರಾವರಿ ಹಾಗೂ ಇತರೆ ಕಾಮಗಾರಿಗಳಿಗಾಗಿ ಬಳಸಲಾಗಿದ್ದು ಬುಡಕಟ್ಟು ಜನಾಂಗದ ಹಕ್ಕನ್ನು ಕಸಿಯಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಕರ್ನಾಟಕ ಪರಿಶಿಷ್ಟ ಜಾತಿಗಳ ಉಪಯೋಜನೆ ಹಾಗೂ ಬುಡಕಟ್ಟು ಉಪಯೋಜನೆ ಕಾಯ್ದೆಯ ಪ್ರಕಾರ ಸರ್ಕಾರ ತನ್ನ ಒಟ್ಟು ಆಯವ್ಯಯದಲ್ಲಿ ಶೇಕಡಾ 24.1ರಷ್ಟು ಹಣವನ್ನು ಎಸ್ಸಿ/ಎಸ್ಟಿ ಕಲ್ಯಾಣಕ್ಕಾಗಿ ಬಳಸಬೇಕು.
ಈ ಕಾನೂನಿನಲ್ಲಿರುವ ಕಲಂ ೭(ಡಿ) ನಲ್ಲಿ ‘deemed expenditure’ ಎಂಬ ಶೀರ್ಷಿಕೆಯಿದ್ದು ಇದು ಗೊಂದಲವನ್ನು ಸೃಷ್ಟಿಸಿದೆ. ಮೂಲಭೂತ ಸೌಕರ್ಯದ ವಿಷಯಕ್ಕೆ ಬಂದಾಗ ಯೋಜನಾ ವೆಚ್ಚದ ಒಂದು ಭಾಗವನ್ನು ಎಸ್ಸಿ/ಎಸ್ಟಿ ಉಪಯೋಜನೆಗಳಿಗೆ ಒದಗಿಸಿದೆ ಎಂದು ಪರಿಗಣಿಸಬಹುದು.
ಉದಾಹರಣೆಗೆ ಸರ್ಕಾರದ ಮುಂಚೂಣಿ ಕಾರ್ಯಕ್ರಮ ಜಲಜೀವನ್ ಮಿಷನ್ (ಜೆಜೆಎಂ)ಗೆ ಈ ಹಣಕಾಸು ವರ್ಷದಲ್ಲಿ ಎಸ್ಸಿ/ಎಸ್ಟಿ ಉಪಯೋಜನೆಗಳಿಂದ 3307 ಕೋಟಿ ರೂ. ಒದಗಿಸಲಾಗಿದೆ. ಇಂತಹ ಹಲವು ಯೋಜನೆಗಳಿಗೆ ಹಣ ಬಳಸಿರುವುದು ಸರ್ಕಾರದ ದಾಖಲೆಗಳಿಂದ ತಿಳಿದುಬಂದಿದೆ. ಎಸ್ ಪಿ-ಟಿಎಸ್ ಪಿ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ದಲಿತ ಸಂಘಟನೆಗಳು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಸಿದ್ಧತೆ ನಡೆಸಿವೆ.