ಸುಪ್ರೀಮ್ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು, ಕಾನೂನು ತಜ್ಞರ ಜೊತೆ ಸಭೆ ನಡೆಸಿದ ಸಿದ್ದರಾಮಯ್ಯ

Prasthutha|

ಕಾವೇರಿ ವಿಚಾರದಲ್ಲಿ ತಜ್ಞರು ಸಿದ್ದರಾಮಯ್ಯಗೆ ಕೊಟ್ಟ ಸಲಹೆ ಏನು?

- Advertisement -

ಬೆಂಗಳೂರು: ತಮಿಳುನಾಡಿಗೆ ಅಕ್ಟೋಬರ್​​ 15ರ ವರೆಗೆ ದಿನ ನಿತ್ಯ 3000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಸೂಚಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾನೂನು ತಜ್ಞರ ಜತೆ ಸಭೆ ನಡೆಸಿದರು.

ಸಿದ್ದರಾಮಯ್ಯ ಇಂದು ಸಾಯಂಕಾಲ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು, ನೀರಾವರಿ ಮತ್ತು ಕಾನೂನು ತಜ್ಞರು, ಮಾಜಿ ಅಡ್ವೊಕೇಟ್ ಜನರಲ್​ಗಳ ಜೊತೆ ಸಭೆ ನಡೆಸಿದರು.

- Advertisement -

ಡಿಕೆ ಶಿವಕುಮಾರ್ ಮತ್ತು ಹಿರಿಯ ಸಚಿವ ಹೆಚ್ ಕೆ ಪಾಟೀಲ್ ಸಹ ಸಭೆಯಲ್ಲಿ ಭಾಗಿಯಾಗಿದ್ದರು. ಕಾವೇರಿ ನೀರು ನಿರ್ವಾಹಣಾ ಪ್ರಾಧಿಕಾರದ ಸೂಚನೆಯಂತೆ ನೀರು ಹರಿಸದಿದ್ದರೆ (ನ್ಯಾಯಾಂಗ ನಿಂದನೆ) ಯಾವ ಕ್ರಮ ಎದುರಿಸಬೇಕಾಗುತ್ತದೆ ಅನ್ನುವ ಅಂಶವನ್ನೂ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ.

ಸಭೆಯ ನಂತರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ, ಸಭೆಯಲ್ಲಿ ಚರ್ಚೆಯಾದ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

ರಾಜ್ಯದ ನೀರಾವರಿ ವಿವಾದಗಳಿಗೆ ಸಂಬಂಧ ಸಲಹಾ ಸಮಿತಿ ರಚನೆಗೆ ತಜ್ಞರು ಸಲಹೆ ನೀಡಿದ್ದಾರೆ. ಮಹದಾಯಿ, ಕಾವೇರಿ, ಕೃಷ್ಣಾ ಜಲ ವಿವಾದದಲ್ಲಿ ಸಲಹೆ ನೀಡಲು ಸಮಿತಿ ರಚಿಸುವಂತೆ ಸೂಚಿಸಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಸಲಹಾ ಸಮಿತಿಯು ಪ್ರತಿದಿನ ಡೇಟಾ ಸಂಗ್ರಹಿಸಿ ರಾಜ್ಯದ ಕಾನೂನು ತಂಡಕ್ಕೆ ಸಲಹೆ ನೀಡಬೇಕು. ಕಾವೇರಿ ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ ಮುಂದೆ ವಾಸ್ತವಾಂಶಗಳನ್ನು ವಿವರಿಸಲಾಗಿದೆ. ಇಷ್ಟೆಲ್ಲ ಮಾಹಿತಿ ನೀಡಿದರೂ ಮತ್ತೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶಿಸಿದ್ದಾರೆ. ಈ ಕುರಿತು ಸುಪ್ರೀಂ ಕೋರ್ಟ್​ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಲು ತಜ್ಞರು ಸಲಹೆ ನೀಡಿದ್ದಾರೆ ಎಂದು ಸಿದ್ದರಾಮಯ್ಯ ವಿವರಿಸಿದರು.

ಮೇಕೆದಾಟು ಯೋಜನೆ ಬಗ್ಗೆ ಪ್ರಸ್ತಾಪ ಮಾಡುವಂತೆ ಸಭೆಯಲ್ಲಿ ತಜ್ಞರು ಸಲಹೆ ನೀಡಿದ್ದಾರೆ. ಸುಪ್ರೀಂಕೋರ್ಟ್​ ಜೊತೆ ಮಾತನಾಡಿ ಮನವೊಲಿಸುವಂತೆ ಸಲಹೆ ನೀಡಿದ್ದಾರೆ. ಮೇಕೆದಾಟು ಅಣೆಕಟ್ಟು ನಿರ್ಮಿಸುವುದರಿಂದ ತಮಿಳುನಾಡಿಗೆ ಸಮಸ್ಯೆಯಾಗಲ್ಲ. ತಮಿಳುನಾಡಿಗೆ ಮನವರಿಕೆ ಮಾಡಿ ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕು. ಮೇಕೆದಾಟು ಯೋಜನೆ ಜಾರಿಯಾದರೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ. ತಮಿಳುನಾಡುಗೆ ಅಗತ್ಯವಿದ್ದಾಗ ನೀರು ಹರಿಸಲು ಸಹಕಾರಿಯಾಗಲಿದೆ. ಜಲವಿದ್ಯುತ್ ಉತ್ಪಾದನೆಗೆ ಬಳಸಿದ ನೀರು ತಮಿಳುನಾಡಿಗೆ ಹರಿದುಹೋಗಲಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಅಲ್ಲದೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್​​​ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಸುಪ್ರೀಂಕೋರ್ಟ್ ಮುಂದೆ ನಮ್ಮ ಕಷ್ಟ ಹೇಳಿಕೊಳ್ಳಲು ಶನಿವಾರವೇ ಮರುಪರಿಶೀಲನಾ ಅರ್ಜಿ ಸಲ್ಲಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

Join Whatsapp