ಬೆಂಗಳೂರು: ಪಿಎಸ್ ಐ ನೇಮಕಾತಿ ಅಕ್ರಮದಲ್ಲಿ ಬಿಜೆಪಿಯ ಸಕ್ರಿಯ ಕಾರ್ಯಕರ್ತೆ ಮತು ನಾಯಕಿ ದಿವ್ಯಾ ಹಾಗರಗಿ ಜೊತೆ ಇಡೀ ಸರಕಾರವೇ ಶಾಮೀಲಾಗಿ ದಂಧೆ ನಡೆಸಿದೆ. ಈಗ ದಿವ್ಯಾ ಹಾಗರಗಿಗೂ ನಮಗೂ ಸಂಬಂಧವಿಲ್ಲ ಎಂದು ಬಿಜೆಪಿಯವರು ಹೇಳಿಕೊಂಡರೆ ಯಾರಾದರೂ ನಂಬಲು ಸಾಧ್ಯವೇ?’ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಗಾಂಧಿ ನಗರ ಕ್ಷೇತ್ರದ ಶಾಸಕ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಬುಧವಾರ ಸರಣಿ ಟ್ವೀಟ್ ಮಾಡಿರುವ ಅವರು, ‘545 ಮಂದಿ ಪಿಎಸ್ಸೈ ನೇಮಕಾತಿಯ ಕಿಂಗ್‍ಪಿನ್ ದಿವ್ಯಾ ಹಾಗರಗಿಗೂ ನಮ್ಮ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಅರಚಿಕೊಳ್ಳುತ್ತಿರುವ ಬಿಜೆಪಿಯವರಿಗೆ ಕೆಲ ಪ್ರಶ್ನೆಗಳು. ದಿವ್ಯಾ ಹಾಗರಗಿ ಕುಟುಂಬಕ್ಕೂ ಗೃಹ ಸಚಿವ ಆರಗ ಜ್ಞಾನೇಂದ್ರರ ನಡುವೆ ಇರುವ ಲಿಂಕ್ ಏನು? ದಿವ್ಯಾ ಹಾಗರಗಿ ನಿವಾಸಕ್ಕೆ ಗೃಹ ಸಚಿವ ಯಾವ ಡೀಲ್ ಕುದುರಿಸಲು ಭೇಟಿ ಕೊಟ್ಟಿದ್ದರು? ಪಿಎಸ್ಸೈ ನೇಮಕಾತಿಯ 200 ಕೋಟಿ ರೂ.ಲಂಚದಲ್ಲಿ ದಿವ್ಯಾ ಹಾಗರಗಿಯಿಂದ ಗೃಹ ಸಚಿವರಿಗೆ ಬಂದ ಪಾಲೆಷ್ಟು?’ ಎಂದು ಹೇಳಿದ್ದಾರೆ.