195 ತಾಲೂಕುಗಳ ಬರ ಘೋಷಣೆಗೆ ಸಚಿವ ಸಂಪುಟ ಒಪ್ಪಿಗೆ: ಸಚಿವ ಹೆಚ್‌ಕೆ ಪಾಟೀಲ್‌ ಮಾಹಿತಿ

Prasthutha|

ಬೆಂಗಳೂರು: ರಾಜ್ಯದ 195 ತಾಲೂಕುಗಳ ಬರ ಘೋಷಣೆಗೆ ಸಚಿವ ಸಂಪುಟ ಶುಕ್ರವಾರ ರಾತ್ರಿ ಒಪ್ಪಿಗೆ ಸೂಚಿಸಿದೆ.

- Advertisement -

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ಬಳಿಕ ಸಚಿವ ಹೆಚ್‌ಕೆ ಪಾಟೀಲ್‌ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ರಾಜ್ಯದಲ್ಲಿ ಬರಗಾಲದ ಸ್ಥಿತಿಯಿಂದ 30,432 ಕೋಟಿ ರೂ. ನಷ್ಟ ಉಂಟಾಗಿದೆ. 4,860 ಕೋಟಿ ರೂ. ಬರ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸುತ್ತಿದ್ದೇವೆ. ರಾಜ್ಯದಲ್ಲಿ ಬರಗಾಲದಿಂದ 39,039 ಲಕ್ಷ ಹೆಕ್ಟೇರ್‌ನಲ್ಲಿ ಕೃಷಿ ಬೆಳೆ ನಷ್ಟವಾಗಿದೆ. ಎನ್‌ಡಿಆರ್‌ಎಫ್‌ ಪ್ರಕಾರ 3824.67 ಕೋಟಿ ರೂ. ಪರಿಹಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೆಚ್‌ಕೆ ಪಾಟೀಲ್‌ ತಿಳಿಸಿದರು.

ರಾಜ್ಯದಲ್ಲಿ ಬರದಿಂದ 2655 ಕೋಟಿ ರೂ. ತೋಟಗಾರಿಕೆ ಬೆಳೆ ನಷ್ಟವಾಗಿದೆ. ತೋಟಗಾರಿಕೆ ಬೆಳೆ ನಷ್ಟಕ್ಕೆ 206 ಕೋಟಿ ಪರಿಹಾರ ಕೋರಲು ತೀರ್ಮಾನ ಕೈಗೊಳ್ಳಲಾಗಿದೆ. 195 ಪಶು ಶಿಬಿರಕ್ಕಾಗಿ 104 ಕೋಟಿ ರೂ.ಗೆ ಬೇಡಿಕೆ ಸಲ್ಲಿಸಲು ನಿರ್ಧಾರ ಕೈಗೊಳ್ಳಲಾಗಿದೆ. 624 ಮೇವು ಬ್ಯಾಂಕ್‌ ಸ್ಥಾಪನೆಗೆ 126.3 ಕೋಟಿ ರೂ. ಪರಿಹಾರಕ್ಕೆ ಬೇಡಿಕೆ ಇಡಲಾಗುವುದು. ಔಷಧಕ್ಕೆ 25 ಕೋಟಿ ರೂ, ಆಹಾರಕ್ಕಾಗಿ ಮೇವು ಬೀಜಕ್ಕೆ 50 ಕೋಟಿ ರೂ. ಪರಿಹಾರಕ್ಕೆ ಮನವಿ ಸಲ್ಲಿಸಲಾಗುವುದು. ದೆಹಲಿಗೆ ತೆರಳಿ ಮನವಿ ಸಲ್ಲಿಸಲು ಕಂದಾಯ ಸಚಿವರಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ ಎಂದು ಪಾಟೀಲ್ ತಿಳಿಸಿದರು.

- Advertisement -

ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧ್ಯಕ್ಷತೆಯ ಸಂಪುಟ ಉಪಸಮಿತಿಯ ಶಿಫಾರಸ್ಸಿನ ಮೇರೆಗೆ ರಾಜ್ಯ ಸರ್ಕಾರ, 195 ಬರ ಪೀಡಿತ ತಾಲ್ಲೂಕುಗಳನ್ನು ಇತ್ತೀಚೆಗಷ್ಟೇ ಅಧಿಕೃತವಾಗಿ ಘೋಷಣೆ ಮಾಡಿತ್ತು.

Join Whatsapp