ಗೃಹ ಲಕ್ಷ್ಮೀ ಯೋಜನೆಗೆ ಆಧಾರ್ ಜೋಡಣೆ ಕಡ್ಡಾಯವಲ್ಲ: ಕರ್ನಾಟಕ ಸರ್ಕಾರ

Prasthutha|

ಬೆಂಗಳೂರು: ಪ್ರತಿ ಮನೆಯ ಯಜಮಾನಿಗೆ ಮಾಸಿಕ 2,000 ರೂ. ನೀಡುವ ಗೃಹ ಲಕ್ಷ್ಮೀ ಯೋಜನೆಗೆ ಆಧಾರ್ ಜೋಡಣೆ ಕಡ್ಡಾಯವಲ್ಲ ಎಂದು ಕರ್ನಾಟಕ ಸರ್ಕಾರ ತಿಳಿಸಿದೆ.

- Advertisement -

ಕುಟುಂಬದ ಯಜಮಾನಿಯು ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಯೊಂದಿಗೆ ಜೋಡಣೆ ಮಾಡದಿದ್ದರೂ ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿಗಳನ್ನು ಸಲ್ಲಿಸುವುದನ್ನು ಅನುಮತಿಸಲು ರಾಜ್ಯ ಸಚಿವ ಸಂಪುಟ ಗುರುವಾರ ನಿರ್ಧರಿಸಿದೆ.

ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಜುಲೈ 16 ರಿಂದ ಪ್ರಾರಂಭವಾಗುವ ನಿರೀಕ್ಷೆ ಇದೆ.

- Advertisement -

ಮೂಲಗಳ ಪ್ರಕಾರ, ಸುಮಾರು 22 ಲಕ್ಷ ಸಂಭಾವ್ಯ ಫಲಾನುಭವಿಗಳು ಬ್ಯಾಂಕ್ ಖಾತೆಗಳೊಂದಿಗೆ ಆಧಾರ್ ಅನ್ನು ಜೋಡಣೆ ಮಾಡಿಲ್ಲ ಎನ್ನಲಾಗಿದೆ. ಈ ವಿಚಾರವಾಗಿ ಕಳವಳ ವ್ಯಕ್ತವಾದ ನಂತರ ಸಂಪುಟ ಸಭೆಯಲ್ಲಿ ಆಧಾರ್ ಜೋಡಣೆ ಕಡ್ಡಾಯವಲ್ಲ ಎಂಬ ನಿರ್ಧಾರ ಕೈಗೊಳ್ಳಲಾಗಿದೆ.

ಬಿಪಿಎಲ್ ಕುಟುಂಬಗಳಿಗೆ ಸಂಬಂಧಿಸಿದ ಬಾಕಿ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವುದಕ್ಕಾಗಿ ಕೋಡ್ ಆಫ್ ಸಿವಿಲ್ ಪ್ರೊಸೀಜರ್​​ಗೆ ತಿದ್ದುಪಡಿ ತರಲು ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಸರ್ಕಾರಿ ಪ್ರಕರಣಗಳನ್ನು ನಿಭಾಯಿಸುವ ಕಾನೂನು ಸಲಹೆಗಾರರ ​​ಹೊಣೆಗಾರಿಕೆಯನ್ನು ನಿಗದಿಪಡಿಸಲು ಸರ್ಕಾರಿ ವ್ಯಾಜ್ಯ ನಿರ್ವಹಣಾ ಮಸೂದೆ ರೂಪಿಸುವುದು, ಕಾಮಗಾರಿಗಳ ಪ್ರಗತಿಯನ್ನು ಖಚಿತಪಡಿಸಿಕೊಳ್ಳಲು 371-ಜೆ ಕಲಂ ಅಡಿಯಲ್ಲಿ ಸಚಿವ ಸಂಪುಟ ಉಪಸಮಿತಿ ರಚಿಸುವುದು, ಉತ್ತಮ ನಡತೆಗಾಗಿ 63 ಕೈದಿಗಳ ಬಿಡುಗಡೆ, ವೈದ್ಯನಾಥನ್ ಸಮಿತಿ ಅನುಷ್ಠಾನಕ್ಕಾಗಿ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಗೆ ತಿದ್ದುಪಡಿ ಹಾಗೂ ಬೆಂಗಳೂರು ಗ್ರಾಮಾಂತರದ ಹೊಸಕೋಟೆ ಬಳಿಯ 111 ಎಕರೆ ಸರ್ಕಾರಿ ಭೂಮಿಯಲ್ಲಿ ಲೇಔಟ್ ನಿರ್ಮಾಣಕ್ಕೆ ಶಿಫಾರಸುಗಳು, ಭೂಸ್ವಾಧೀನಕ್ಕೆ ಸಂಬಂಧಿಸಿದ ಇತರ ಕಾರ್ಯಸೂಚಿಗಳನ್ನು ಸಂಪುಟದಲ್ಲಿ ಚರ್ಚಿಸಲಾಗಿದೆ.