ಕರ್ನಾಟಕದಲ್ಲಿ ವೆಜ್ & ನಾನ್‌ವೆಜ್ ಆಹಾರ ತಯಾರಿಕೆಗೆ ಕೃತಕ ಬಣ್ಣ ಬಳಕೆ ನಿಷೇಧಿಸಿ ಆದೇಶ

Prasthutha|

ಬೆಂಗಳೂರು: ವೆಜ್ & ನಾನ್‌ವೆಜ್ ಕಬಾಬ್‍ ಮುಂತಾದ ಆಹಾರ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

ಉಲ್ಲಂಘನೆಯ ಪ್ರಕರಣಗಳು ಕಂಡುಬಂದಲ್ಲಿ ತಯಾರಿಸುವವರ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ನಿಯಮ 59ರಡಿ 7 ವರ್ಷಗಳಿಂದ ಜೀವಾವಧಿ ಅವಧಿಯವರೆಗೆ ಜೈಲು ಶಿಕ್ಷೆಯನ್ನು ಮತ್ತು ರೂ.10.00 ಲಕ್ಷಗಳವರೆಗೆ ದಂಡವನ್ನು ವಿಧಿಸಲು ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ದಾಖಲಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ ಕಬಾಬ್‍ನ ಗುಣಮಟ್ಟ ಕೃತಕ ಬಣ್ಣ ಬೆರಸುವಿಕೆಯಿಂದಾಗಿ ಕಳಪೆಯಿಂದ ಕೂಡಿದ್ದು, ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವುದಾಗಿ ಮಾಧ್ಯಮಗಳಲ್ಲಿ ಮತ್ತು ಸಾರ್ವಜನಿಕರಿಂದ ವರದಿಯಾಗುತ್ತಿದ್ದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ ಕಬಾಬ್‍ನ 39 ಮಾದರಿಗಳನ್ನು ಸಂಗ್ರಹಿಸಿ ರಾಜ್ಯ ಪ್ರಯೋಗಾಲಯಗಳಲ್ಲಿ ವಿಶ್ಲೇಷಣೆಗೊಳಪಡಿಸಲಾಗಿತ್ತು.

- Advertisement -

ಫಲಿತಾಂಶದಲ್ಲಿ 08 ಮಾದರಿಗಳು ಸನ್‍ಸೆಟ್ ಯೆಲ್ಲೋ ಮತ್ತು ಕಾರ್ಮೋಸಿನ್ ಕೃತಕ ಬಣ್ಣಗಳು ಕಂಡು ಬಂದಿದ್ದು, ನಿಯಮಾನುಸಾರ ಇದು ಅಸುರಕ್ಷಿತವಾಗಿರುತ್ತವೆ.

ಕೃತಕ ಬಣ್ಣಗಳನ್ನು ಬಳಸಿರುವ ತಿಂಡಿ ತಿನಿಸುಗಳನ್ನು ದೀರ್ಘಕಾಲ ಬಳಸುವುದರಿಂದ ಚಿಕ್ಕಮಕ್ಕಳೂ ಸೇರಿದಂತೆ ಬಳಕೆದಾರರಿಗೆ ಕ್ಯಾನ್ಸರ್‍ನಂತಹ ಮಾರಕ ರೋಗಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸಾರ್ವಜನಿಕರು ಕೃತಕ ಬಣ್ಣಗಳನ್ನು ಬಳಸಿ ಉಪಯೋಗಿಸದಂತೆ/ಮಿತವಾಗಿ ಬಳಸುವಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Join Whatsapp