ಬೆಂಗಳೂರು: ಅಕ್ಟೋಬರ್ ತಿಂಗಳ ಆರಂಭದಿಂದ ಕರ್ನಾಟಕದ ವಿವಿಧ ಭಾಗಗಳಲ್ಲಿ ಸುರಿದ ಮಳೆಗೆ 13 ಮಂದಿ ಸಾವನ್ನಪ್ಪಿದ್ದಾರೆ. ಜಾನುವಾರು, ಆಸ್ತಿಪಾಸ್ತಿಗಳಿಗೆ ದೊಡ್ಡ ಪ್ರಮಾಣದ ಹಾನಿ ಉಂಟಾಗಿದ್ದು, ಕೂಡಲೇ ಪರಿಹಾರ ಒದಗಿಸುವಂತೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ. ಪರಿಹಾರ ವಿತರಣೆಯಲ್ಲಿ ಯಾವುದೇ ಲೋಪ ಆಗಬಾರದು ಎಂದು ಅವರು ತಿಳಿಸಿದ್ದಾರೆ.
ಮಳೆ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಮುಖ್ಯಮಂತ್ರಿ ಪರಿಸ್ಥಿತಿಯನ್ನು ಅವಲೋಕನ ನಡೆಸಿದರು. ಹಾನಿ ದಾಖಲಿಸುವಾಗ ಕೆಲವೆಡೆ ಲೋಪ ಆಗಿರುವುದು ನನ್ನ ಗಮನಕ್ಕೆ ಬಂದಿದೆ. ಮುಂದಕ್ಕೆ ಯಾವುದೇ ಲೋಪ ಆಗದಂತೆ ಜಿಲ್ಲಾಧಿಕಾರಿಗಳು ಮುಂದಾಳತ್ವ ವಹಿಸಬೇಕು. ಪರಿಹಾರವನ್ನು ನೀಡುವಾಗ ಸ್ಥಳೀಯ ವಾಸ್ತವತೆಯನ್ನು ಆಧರಿಸಿರಬೇಕು. ಕರ್ತವ್ಯಲೋಪ ಎಸಗುವ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಳೆ ಹಾನಿಗೆ ಎನ್.ಡಿ.ಆರ್.ಎಫ್. ಮಾರ್ಗಸೂಚಿಗಳಿಗಿಂತ ಹೆಚ್ಚುವರಿ ಪರಿಹಾರವನ್ನು ನೀಡಲು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆಯ ಆಯುಕ್ತರು ಸುತ್ತೋಲೆ ಹೊರಡಿಸಬೇಕು. ಜಿಲ್ಲಾಧಿಕಾರಿಗಳು ತಪ್ಪದೇ ಸ್ಥಳಕ್ಕೆ ಭೇಟಿ ನೀಡಿ ಹಾನಿ ದಾಖಲಿಸಬೇಕು ಹಾಗೂ ಪರಿಹಾರ ವಿತರಣೆಯಲ್ಲಿ ತಹಶೀಲ್ದಾರ್’ಗಳಿಗೆ ಸೂಕ್ತ ಸೂಚನೆ ನೀಡಬೇಕು ಎಂದು ಅವರು ತಮ್ಮ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಕ್ಟೋಬರ್ 1 ರಿಂದ ಮಳೆಯಿಂದಾಗಿ 28 ಜಾನುವಾರುಗಳು ಸಾವನ್ನಪ್ಪಿದ್ದು, 3,309 ಮನೆಗಳಿಗೆ ಹಾನಿಯಾಗಿವೆ. ಸುಮಾರು 6,279 ಹೆಕ್ಟೇರ್ನಲ್ಲಿ ಬೆಳೆ ಹಾನಿಯಾಗಿವೆ. ಸರ್ಕಾರ ಐದು ಪರಿಹಾರ ಶಿಬಿರಗಳನ್ನು ತೆರೆದಿದ್ದು, 1,330 ಸಂತ್ರಸ್ತ ಜನರು ಆಶ್ರಯ ಪಡೆಯುತ್ತಿದ್ದಾರೆ. ಇನ್ಪುಟ್ ಸಬ್ಸಿಡಿಯನ್ನು ಆದ್ಯತೆ ಮೇರೆಗೆ ವಿತರಿಸಬೇಕು ಮತ್ತು ಅಕ್ಟೋಬರ್ನಲ್ಲಿ ಸಂಭವಿಸಿದ ಮಳೆ ಹಾನಿಗೆ ಪರಿಹಾರವನ್ನು ತಕ್ಷಣವೇ ಜಂಟಿ ಸಮೀಕ್ಷೆ ನಡೆಸಿ ಈ ತಿಂಗಳೊಳಗೆ ವಿತರಿಸಬೇಕು ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಭೂತಪೂರ್ವ ಮಳೆಯಾಗುತ್ತಿರುವುದರಿಂದ ಹಠಾತ್ ಪ್ರವಾಹವನ್ನು ಪರಿಶೀಲಿಸಿ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು. ಮನೆ ಹಾಗೂ ಬೆಳೆ ಹಾನಿ ಪರಿಹಾರ ವಿತರಿಸಲು ಹಣದ ಕೊರತೆ ಇಲ್ಲ ಎಂದರು. ಆದರೆ, ಮೂಲಸೌಕರ್ಯಕ್ಕೆ ಆಗಿರುವ ಹಾನಿಗೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಅನುದಾನ ಪಡೆದು ಕಾಮಗಾರಿ ಆರಂಭಿಸಬೇಕು ಎಂದ ಅವರು, ಮೂರು ದಿನಗಳ ನಂತರ ಮತ್ತೊಂದು ಸುತ್ತಿನ ಸಭೆ ನಡೆಸಿ ಮೂಲಸೌಕರ್ಯ ಹಾನಿ ಕುರಿತು ಚರ್ಚಿಸಲಾಗುವುದು ಎಂದು ತಿಳಿಸಿದರು.
ಮುಂದಿನ ಹಂತದಲ್ಲಿ ಇನ್ನೆರಡು ದಿನಗಳಲ್ಲಿ ಸುಮಾರು 2 ಲಕ್ಷ ರೈತರಿಗೆ ಸುಮಾರು 250 ಕೋಟಿ ರೂ. ಪರಿಹಾರ ನೀಡಲಾಗುವುದು. ಮಳೆ ಮತ್ತು ಪ್ರವಾಹದಿಂದಾಗಿ ಜೂನ್ 1 ರಿಂದ ಸೆಪ್ಟೆಂಬರ್ 30 ರವರೆಗೆ 48,485 ಮನೆಗಳಿಗೆ ಹಾನಿಯಾಗಿದೆ. 42,661 ಮನೆಗಳಿಗೆ ಪರಿಹಾರ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.