ಕರಿಕ್ಕಳ : ಮಂಜೇಶ್ವರ-ಸುಬ್ರಹ್ಮಣ್ಯ ಹೆದ್ದಾರಿಯ ಪಂಜ ಸಮೀಪದ ಕರಿಕ್ಕಳದ ರಸ್ತೆ ಬದಿ ಕುಸಿದು ಬೀಳಲು ಸಿದ್ಧವಾಗಿರುವ ಗುಡ್ಡದ ಬಗ್ಗೆ ಸುರಕ್ಷಿತ ಕ್ರಮ ಕೈಗೊಳ್ಳುವಂತೆ ಎಣ್ಮೂರು ವಲಯ ಅಧ್ಯಕ್ಷರಾದ ಹಮೀದ್ ಮರಕ್ಕಡ ಒತ್ತಾಯಿಸಿದ್ದಾರೆ.
ಮಂಜೇಶ್ವರ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪಂಜ ಸಮೀಪದ ಕರಿಕ್ಕಳದಲ್ಲಿ ಕಳೆದ ನಾಲ್ಕು ತಿಂಗಳ ಹಿಂದೆ ಬಂದ ಭಾರಿ ಗಾಳಿ ಮಳೆಗೆ ರಸ್ತೆ ಬದಿಯ ಗುಡ್ಡ ಜರಿದಿತ್ತು,ಈ ಘಟನೆ ರಾತ್ರಿ ಹೊತ್ತಲ್ಲಿ ನಡೆದುದರಿಂದ ಮತ್ತು ಆ ಸಮಯದಲ್ಲಿ ವಾಹನ ಸಂಚಾರ ಇಲ್ಲದೆ ಇದ್ದುದರಿಂದ ಸಂಭಾವ್ಯ ಅಪಾಯ ತಪ್ಪಿತ್ತು. ಎಸ್‌ಡಿಪಿಐ ಕಾರ್ಯಕರ್ತರು ಮಧ್ಯರಾತ್ರಿಯಲ್ಲಿ ಶ್ರಮದಾನ ನಡೆಸಿ ರಸ್ತೆಗೆ ಬಿದ್ದಿದ್ದ ಮರಗಳನ್ನು ಮತ್ತು ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು ಎಂದು ಅವರು ಹೇಳಿದ್ದಾರೆ.
ಮರುದಿನ ಅಧಿಕಾರಿಗಳು ಆಗಮಿಸಿ ಜೆಸಿಬಿ ಮೂಲಕ ಮಣ್ಣನ್ನು ತೆರವುಗೊಳಿಸಿ ಬರೆ ಜರೆದಿದ್ದನ್ನು ಅರ್ಧಂಬರ್ಧ ಕೆಲಸ ಮಾಡಿ, ಹಾಗೆಯೇ ಬಿಟ್ಟು ಹೋದವರು ಪುನಃ ಕಣ್ಣೆತ್ತಿಯು ನೋಡಿಲ್ಲ ಎಂದು ತಿಳಿಸಿದ್ದಾರೆ.
ರಸ್ತೆಯ ಬದಿಯ ಬರೆ ಜರಿದಿದ್ದರಿಂದ ಹಲವಾರು ಮರಗಳು ಇಂದೋ ನಾಳೆಯೋ ಬೀಳಲಿದೆ ಎಂಬ ಅಪಾಯಕಾರಿ ಸ್ಥಿತಿಯಲ್ಲಿದೆ, ಸೂಕ್ತ ಕ್ರಮ ಕೈಗೊಳ್ಳಬೇಕಾದ ಸಂಭಂದಪಟ್ಟ ಇಲಾಖೆ ಕಣ್ಣು ಮುಚ್ಚಿ ಕುಳಿತಂತೆ ಕಾಣುತ್ತಿದೆ. ಅದೇ ರೀತಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಇರುವ ಈ ಸ್ಥಳದಲ್ಲಿ ಕೆಇಬಿ ಇಲಾಖೆಯ ಬೆಳ್ಳಾರೆ ಗುತ್ತಿಗಾರು ಮಾರ್ಗದಲ್ಲಿ ಹಾದು ಹೋಗುವ 33 ಹೆಚ್ ಟಿ ಲೈನ್ ಕೂಡ ಹಾಕಿದ್ದಾರೆ. ಅರ್ಧ ಜರಿದಿರುವ ಬರೆಯ ಪಕ್ಕದಲ್ಲಿರುವ ಮರಗಳು ಸಣ್ಣ ಗಾಳಿ ಮಳೆ ಬಂದು ಬಿದ್ದರೆ ಹೆಚ್.ಟಿ. ಲೈನ್ ಮತ್ತು ವಿದ್ಯುತ್ ಕಂಬಗಳ ಮೇಲೆ ಬಿದ್ದು ನೇರವಾಗಿ ರಾಜ್ಯ ಹೆದ್ದಾರಿಯ ರಸ್ತೆಯ ಮೇಲೆ ಬೀಳಲಿದೆ ಎಂದು ಹೇಳಿದ್ದಾರೆ
ಈ ಮಾರ್ಗದಲ್ಲಿ ದಿನ ನಿತ್ಯ ಸುಬ್ರಹ್ಮಣ್ಯ ದೇವಾಸ್ಥಾನಕ್ಕೆ ಸಾವಿರಾರು ಭಕ್ತರು ಸಂಚರಿಸುತ್ತಿರುತ್ತಾರೆ. ಶಾಲಾ ಕಾಲೇಜ್ ವಿದ್ಯಾರ್ಥಿಗಳು, ಸೇರಿದಂತೆ ನೂರಾರು ವಾಹನಗಳು ಸಂಚರಿಸುತ್ತಿರುತ್ತದೆ, ಗಾಳಿ ಮಳೆಗೆ ಈ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳು ಬಿದ್ದರೆ ಅಪಾಯ ಕಟ್ಟಟ್ಟಬುತ್ತಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ನಿತ್ಯ ಹಲವಾರು ಜನಪ್ರತಿನಿಧಿಗಳು, ಸರಕಾರಿ ಅಧಿಕಾರಿಗಳು ಈ ಮಾರ್ಗದಲ್ಲಿ ಸಂಚರಿಸುತ್ತಿದ್ದರೂ ಈ ಅಪಾಯಕಾರಿ ಪರಿಸ್ಥಿತಿಯನ್ನು ಕಂಡು ಕಾಣದಂತೆ ವರ್ತಿಸುತ್ತಿರುವುದು ವಿಪರ್ಯಾಸವಾಗಿದೆ.
ಹೀಗಾಗಿ ತಕ್ಷಣವೆ ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಂಡು, ಸಂಭಾವ್ಯ ಅಪಾಯವನ್ನು ತಪ್ಪಿಸುವಂತೆ ಹಮೀದ್ ಮರಕ್ಕಡ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.