December 3, 2020

ಕರವೇಯಲ್ಲಿ ಸರ್ವಧರ್ಮೀಯರೂ ಇರುವುದು ನಮಗೆ ಹೆಮ್ಮೆಯಿದೆ : ಯತ್ನಾಳ್ ಗೆ ಕರವೇ ನಾರಾಯಣ ಗೌಡ ಟಾಂಗ್

ಬೆಂಗಳೂರು : ಕರ್ನಾಟಕ ರಕ್ಷಣಾ ವೇದಿಕೆ(ಕರವೇ)ಯಲ್ಲಿ ಸರ್ವಧರ್ಮೀಯರೂ ಇದ್ದಾರೆ, ಅದಕ್ಕೆ ತಮಗೆ ಹೆಮ್ಮೆ ಇದೆ ಎಂದು ಹೇಳುವ ಮೂಲಕ ಸಂಘಟನೆಯ ಅಧ್ಯಕ್ಷ ನಾರಾಯಣ ಗೌಡ, ವಿವಾದಾತ್ಮಕ ಹೇಳಿಕೆಗಳಿಗೆ ಕುಖ್ಯಾತರಾಗಿರುವ ಶಾಸಕ ಬಸನಗೌಡಗೆ ಟಾಂಗ್ ನೀಡಿದ್ದಾರೆ. ಫೇಸ್ ಬುಕ್ ಪೋಸ್ಟ್ ಮತ್ತು ಟ್ವಿಟರ್ ನಲ್ಲಿ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿರುವ ನಾರಾಯಣ ಗೌಡ, ಯತ್ನಾಳ್ ವಿರುದ್ಧ ಖಡಕ್ ನುಡಿಗಳನ್ನಾಡಿದ್ದಾರೆ.  

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ತಮ್ಮ ಬಾಯಿಹರುಕತನ ಪ್ರದರ್ಶಿಸಿದ್ದಾರೆ. ನೆರೆ ಪರಿಹಾರ, ಜಿಎಸ್ ಟಿ ಬಾಕಿ ತರಲು ಒಕ್ಕೂಟ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿ ಎಂದು ಹಿಂದೆ ಸವಾಲು ಹಾಕಿದ್ದೆ. ಆದರೆ ಯತ್ನಾಳ್ ಆ ವಿಷಯ ಮಾತಾಡುತ್ತಿಲ್ಲ. ಅವರಿಗೆ ಜನರ ಕಷ್ಟಗಳ ಕುರಿತು ಕಾಳಜಿಯಿಲ್ಲ, ಕೇವಲ ಪ್ರಚಾರಕ್ಕಾಗಿ ನಾಲಿಗೆ ಹರಿಬಿಡುತ್ತಿದ್ದಾರೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆಯನ್ನು ಕಳ್ಳರ ರಕ್ಷಣಾ ವೇದಿಕೆ ಎಂದು ಅವರು ಹೇಳಿದ್ದಾರೆ. ಈ ನಾಡಿನ ರಕ್ಷಣೆಗಾಗಿ ತಮ್ಮ ಸರ್ವಸ್ವವನ್ನು ಧಾರೆಯೆರೆದು ಹೋರಾಡುತ್ತಿರುವ ರಾಜ್ಯದ ಲಕ್ಷಾಂತರ ಕರವೇ ಕಾರ್ಯಕರ್ತರು ಸರಿಯಾದ ಸಂದರ್ಭದಲ್ಲಿ ಸರಿಯಾದ ಉತ್ತರ ನೀಡುತ್ತಾರೆ. ಯಾರು ಕಳ್ಳರು, ಯಾರು ಸುಳ್ಳರು ಎಂಬುದನ್ನು ರಾಜ್ಯದ ಜನತೆಯ ಮುಂದೆ ತೆರೆದಿಡಲಿದ್ದಾರೆ ಎಂದು ಅವರು ಸವಾಲು ಹಾಕಿದ್ದಾರೆ.

ಯತ್ನಾಳ್ ಅವರು ನಾಡಿನ ಸಾಕ್ಷಿಪ್ರಜ್ಞೆ, ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ಎಚ್.ಎಸ್.ದೊರೆಸ್ವಾಮಿಯವರ ಕುರಿತೂ ಕೀಳಾಗಿ ಮಾತಾಡಿದ್ದಾರೆ. ಇದು ಅವರ ಸಂಸ್ಕಾರ, ಸಂಸ್ಕೃತಿಯನ್ನು ತೋರಿಸುತ್ತದೆ. ಒಬ್ಬ ಸ್ವಾತಂತ್ರ್ಯ ಹೋರಾಟಗಾರರನ್ನು‌ ನಿಂದಿಸುವ ಇವರು ಯಾವ ಸೀಮೆಯ ದೇಶಭಕ್ತರು? ಇವರೆಂಥ ರಾಷ್ಟ್ರೀಯವಾದಿಗಳು? ಎಂದು ನಾರಾಯಣ ಗೌಡ ಪ್ರಶ್ನಿಸಿದ್ದಾರೆ.

“ಕರವೇಯಲ್ಲಿ ಸಾಬರು ಇದ್ದಾರೆ” ಎಂದು ಹೇಳಿದ್ದಾರೆ ಯತ್ನಾಳ್. ಕರವೇಯಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧರಾದಿಯಾಗಿ ಎಲ್ಲ ಧರ್ಮದವರೂ ಇದ್ದಾರೆ. ಭಾರತ ಸಂವಿಧಾನದ 14 ನೇ ವಿಧಿ, ಎಲ್ಲ ಭಾರತೀಯರೂ ಸಮಾನರೆಂದು ಹೇಳುತ್ತದೆ. ಕರವೇಯಲ್ಲಿ ಎಲ್ಲ ಧರ್ಮದವರೂ ಕನ್ನಡಸೇವೆಯಲ್ಲಿ ತೊಡಗಿದ್ದಾರೆ, ಅದಕ್ಕಾಗಿ ನಾವು ಹೆಮ್ಮೆಪಡುತ್ತೇವೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ “ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು” ಎಂಬ ಘೋಷವಾಕ್ಯದೊಂದಿಗೆ 21 ವರ್ಷಗಳಿಂದ ಕನ್ನಡ ಚಳವಳಿಯನ್ನು ಸಂಘಟಿಸುತ್ತಿದೆ. ಧರ್ಮ-ಧರ್ಮಗಳ ನಡುವೆ ದ್ವೇಷ ಹರಡಿ, ಕೋಮುಗಲಭೆ ಎಬ್ಬಿಸಿ ಬೇಳೆ ಬೇಯಿಸಿಕೊಳ್ಳುವುದು ಯತ್ನಾಳರಂಥವರ ಕುತಂತ್ರ. ಅಂಥ ಹೀನ ಕೆಲಸ ನಾವು ಮಾಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಧರ್ಮ-ಧರ್ಮಗಳ ನಡುವೆ ಜಗಳ ಹಚ್ಚಿದ ನಂತರ, ಕನ್ನಡಿಗರ ವಿರುದ್ಧ ಮರಾಠಿಗರನ್ನು ಎತ್ತಿಕಟ್ಟುವ ಅಪಾಯಕಾರಿ ಆಟವನ್ನು ಯತ್ನಾಳ್ ಆಡುತ್ತಿದ್ದಾರೆ. ಇದು ಅವರಿಗೆ ತಿರುಗುಬಾಣವಾಗುತ್ತದೆ. ಎಂಇಎಸ್, ಶಿವಸೇನೆಯಂಥವನ್ನು ಬಿಟ್ಟರೆ ಕರ್ನಾಟಕದ ಮರಾಠಿಗರು, ಕನ್ನಡಿಗರೊಂದಿಗೆ ಅನ್ಯೋನ್ಯವಾಗಿದ್ದಾರೆ. ಯತ್ನಾಳ್ ಕುತಂತ್ರ ಫಲ ಕೊಡುವುದಿಲ್ಲ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.  

ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ನಿಜಕ್ಕೂ ಜನರ ಪರವಾದ ಕಾಳಜಿ ಇದ್ದರೆ, ಅವರದೇ ಜಿಲ್ಲೆ ವಿಜಯಪುರದಲ್ಲಿ ನರಳುತ್ತಿರುವ ನೆರೆಸಂತ್ರಸ್ಥರ ಜತೆ ನಿಲ್ಲಲಿ. ನೆರೆ ಪರಿಹಾರ ಯಾಕೆ ಕೊಟ್ಟಿಲ್ಲವೆಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಲಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋರಾಟ ರೂಪಿಸಲಿ. ಆಗ ಅವರನ್ನು ಜನರು ನಾಯಕರೆಂದು ಪರಿಗಣಿಸುತ್ತಾರೆ ಎಂದು ನಾರಾಯಣ ಗೌಡ ತಿಳಿಸಿದ್ದಾರೆ.

ಟಾಪ್ ಸುದ್ದಿಗಳು

ವಿಶೇಷ ವರದಿ