ಬೀದರ್: ರಾಜ್ಯದ ಮದರಸಾಗಳಲ್ಲಿ ವಾರಕ್ಕೆ ಎರಡು ದಿನ ಕನ್ನಡ ಕಲಿಸುವ ಯೋಜನೆ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಯೋಗಿಕವಾಗಿ ರಾಜ್ಯದ ಬೆಂಗಳೂರು, ವಿಜಯಪುರ, ರಾಯಚೂರು ಹಾಗೂ ಕಲಬುರಗಿಯ ಕೆಲ ಆಯ್ದ ಮದರಸಾಗಳಲ್ಲಿ ಶುರು ಮಾಡಲಾಗುವುದು. ಅದರ ಸಾಧಕ–ಬಾಧಕ ನೋಡಿಕೊಂಡು ರಾಜ್ಯದ ಇತರೆ ಕಡೆಗಳಲ್ಲಿಯೂ ವಿಸ್ತರಿಸುವ ಯೋಚನೆ ಇದೆ. ಭಾಷೆಯ ಅಂತರ ದೂರ ಮಾಡುವುದು ಇದರ ಮುಖ್ಯ ಉದ್ದೇಶ. ಅಲ್ಪಸಂಖ್ಯಾತ ಮುಸ್ಲಿಮರಿಂದಲೂ ಇದಕ್ಕಾಗಿ ಬೇಡಿಕೆ ಬಂದಿತ್ತು ಎಂದು ತಿಳಿಸಿದ್ದಾರೆ.
ಈ ಸಂಬಂಧ ಮದರಸಾಗಳನ್ನು ನಡೆಸುತ್ತಿರುವ ಕೆಲ ವಿದ್ವಾಂಸರೊಂದಿಗೆ ಚರ್ಚಿಸಿದ್ದೇನೆ. ಯಾವ ವಿಷಯ ಕಲಿಸಬೇಕೆಂಬ ಗೊಂದಲ ಇಲ್ಲ. ಏಕೆಂದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದಲೇ ಪಠ್ಯ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.