ಕನ್ನಡ ಸಾಹಿತ್ಯ ಪರಿಷತ್ತು ಸ್ವಾಯತ್ತತೆ ಕಳೆದುಕೊಂಡಿದೆ: ಅಧ್ಯಕ್ಷರು ಸರ್ಕಾರದ ಅಧೀನ ಮನಸ್ಥಿತಿಗೆ ಒಳಪಟ್ಟಿದ್ದಾರೆ – ಡಾ. ನರಹಳ್ಳಿ ಬಾಲ ಸುಬ್ರಹ್ಮಣ್ಯಂ

Prasthutha|

ಬೆಂಗಳೂರು : ಸಾಹಿತ್ಯ ಪರಿಷತ್ತು ತನ್ನ ಸ್ವಾಯತ್ತತೆ ಕಳೆದುಕೊಂಡಿದ್ದು, ಪರಿಷತ್ತಿನ ಅಧ್ಯಕ್ಷರಿಗೆ ವ್ಯಕ್ತಿತ್ವವೇ ಇಲ್ಲದಂತಾಗಿದೆ ಎಂದು ಹಿರಿಯ ಸಾಂಸ್ಕೃತಿಕ ಚಿಂತಕ, ವಿಮರ್ಶಕ ಡಾ. ನರಹಳ್ಳಿ ಬಾಲ ಸುಬ್ರಮಣ್ಯಂ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

- Advertisement -

ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ತನ್ನ ಘನತೆ ಕಳೆದುಕೊಳ್ಳುತ್ತಿದೆ. ಆಡಳಿತ ಪಕ್ಷದ ಮರ್ಜಿಗೆ ಒಳಗಾದವರಂತೆ ಇಲ್ಲಿರುವವರು ಕೆಲಸ ಮಾಡುತ್ತಿದ್ದಾರೆ. ಪರಿಷತ್ತಿನ ಅಧ್ಯಕ್ಷರು ಸರ್ಕಾರದ ಅಧೀನ ಮನಸ್ಥಿತಿಗೆ ಒಳಗಾದವರ ರೀತಿಯಲ್ಲಿ ಪರಿವರ್ತಿತರಾಗುತ್ತಿದ್ದಾರೆ. ಸಾಹಿತ್ಯ ಪರಿಷತ್ತು ತನ್ನ ಗತ ವೈಭವವನ್ನು ಮತ್ತೆ ಗಳಿಸಲು ಪರಿಷತ್ತಿನ ನಾಯಕತ್ವ ಬಲಗೊಳ್ಳಬೇಕು. ಉತ್ತಮ ವ್ಯಕ್ತಿಗಳನ್ನು ಈ ಹುದ್ದೆಗೆ ಆರಿಸಬೇಕಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆ ಹಿನ್ನೆಲೆಯಲ್ಲಿ ಪರಿಷತ್ತಿನೊಂದಿಗೆ ಐದು ದಶಕಗಳ ಕಾಲ ನಿಕಟ ಬಾಂಧವ್ಯ ಹೊಂದಿರುವ ಡಾ. ನರಹಳ್ಳಿ ಬಾಲ ಸುಬ್ರಮಣ್ಯಂ, ನಾಡು, ನುಡಿ, ಸಾಹಿತ್ಯ ಪರಿಷತ್ತಿನ ಘನತೆ, ಗೌರವ ಕುರಿತು ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಂಡರು.
ಗಟ್ಟಿ ನಾಯಕತ್ವ ಇದ್ದಾಗ ಮಾತ್ರ ಕನ್ನಡದ ಮಾತೃ ಸಂಸ್ಥೆಗೆ ಮನ್ನಣೆ ದೊರೆಯುತ್ತದೆ. ಸಂಘ ಸಂಸ್ಥೆಗಳು ಸ್ವಾಯತ್ತತೆ ಕಳೆದುಕೊಂಡಿವೆ. ಸಂಘದ ಅಧ್ಯಕ್ಷರ ಮಾತಿಗೆ ಅತಿ ಹೆಚ್ಚಿನ ಮನ್ನಣೆ ಇರಬೇಕು. ಯಾರು ಏನು ಬೇಕಾದರೂ ಮಾತನಾಡಬಹುದು ಎನ್ನುವ ಮನಸ್ಥಿತಿ ಬೇಡ. ಆದರೆ ಮಾತನಾಡುವ ವ್ಯಕ್ತಿ ಅತ್ಯಂತ ಮುಖ್ಯರಾಗುತ್ತಾರೆ” ಎಂದು ಹೇಳಿದರು.

- Advertisement -

ಕನ್ನಡ ಸಾಹಿತ್ಯ ಸಮ್ಮೇಳನಗಳ ಉದ್ದೇಶವೇ ಅರ್ಥವಾಗುತ್ತಿಲ್ಲ. ಸಮ್ಮೇಳನಗಳಿಗಿಂತ ಮುಂಚೆ ನಮಗೆ ಕನ್ನಡದ ಎಲ್ಲಾ ಸಮಗ್ರ ಪುಸ್ತಕಗಳ ಬೃಹತ್ ಗ್ರಂಥ ಭಂಡಾರ ಅಗತ್ಯವಿದೆ. ಇದಕ್ಕಾಗಿ ಒಂದು ಬಾರಿ ಸಮ್ಮೇಳನ ನಡಸುವುದನ್ನು ನಿಲ್ಲಿಸಿ ಅದರಿಂದ ದೊರೆಯುವ 12 ರಿಂದ 15 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯುತ್ತಮವಾದ ರೆಫರೆನ್ಸ್ ಲೈಬ್ರರಿ ಸ್ಥಾಪಿಸಿದರೆ ಕನ್ನಡವನ್ನು ಗಂಭೀರವಾಗಿ ಅಧ್ಯಯನ ಮಾಡುವವರಿಗೆ ಇದರಿಂದ ಅನುಕೂಲವಾಗುತ್ತದೆ. ತಾವು ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಆಗಿದ್ದ ಸಂದರ್ಭದಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ್ದೆ. ಆಗ 35 ಮಂದಿಯಲ್ಲಿ ಒಬ್ಬರು ಮಾತ್ರ ನನಗೆ ಬೆಂಬಲ ನೀಡಿದ್ದರು. ಆದರೆ ಈಗಿನ ಸಮ್ಮೇಳನಗಳು ಅರ್ಥಕಳೆದುಕೊಂಡಿವೆ. ಸಮ್ಮೇಳನದಲ್ಲಿ ಊಟ, ಮತ್ತಿತರ ವಿಚಾರಗಳಿಗೆ ಆದ್ಯತೆ ನೀಡಲಾಗುತ್ತಿದೆ. ಆದರೆ ನಿರ್ಣಯಗಳಿಗೆ ಹೆಚ್ಚಿನ ಮನ್ನಣೆ ಕೊಡುತ್ತಿಲ್ಲ. ಹೀಗಿರುವಾಗ ಸಮ್ಮೇಳನದ ನಿರ್ಣಯಗಳ ಬಗ್ಗೆ ಚರ್ಚೆ ಮಾಡಿ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

ಆಧುನಿಕ ಯುಗದಲ್ಲಿ ಸಾಮಾಜಿಕ ಚಿಂತನೆಗಳು, ಸಂಸ್ಕೃತಿಯಲ್ಲಿ ಪಲ್ಲಟವಾಗಬೇಕಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಮನುಷ್ಯ ಸುಖ ಸಂತೋಷದ ಬೆನ್ನತ್ತಿದ್ದಾನೆ. ಜೀವನ ಶೈಲಿಯಲ್ಲೂ ಸಾಕಷ್ಟು ಬದಲಾವಣೆಗಾಗಿವೆ. ಈಗಿನ ಪರಿಸ್ಥಿತಿಯಲ್ಲಿ ಪ್ರತಿಯೊಂದು ಮನೆಯಲ್ಲೂ ಒಂದೊಂದು ಗ್ರಂಥಾಲಯ ಇರಬೇಕು. ಅದರಲ್ಲಿ ಕನ್ನಡ ಪುಸ್ತಕಗಳು ಹೆಚ್ಚಾಗಿರಬೇಕು. ಗ್ರಂಥಾಲಯವಿಲ್ಲದ ಮನೆ ಸ್ಮಶಾನದಂತೆ ಎಂದು ರಾಷ್ಟ್ರಕವಿ ಕುವೆಂಪು ಹೇಳಿದ್ದರು. ಇದನ್ನು ಕನ್ನಡಗರು ಅರ್ಥಮಾಡಿಕೊಳ್ಳಬೇಕು ಎಂದು ಡಾ. ನರಹಳ್ಳಿ ಬಾಲ ಸುಬ್ರಹ್ಮಣ್ಯಂ ಹೇಳಿದರು.

ಕನ್ನಡ ಭಾಷೆ ಬಳಕೆ ಹೆಚ್ಚಾಗಬೇಕು. ವಿಜ್ಞಾನ, ತಂತ್ರಜ್ಞಾನ ಒಳಗೊಂಡಂತೆ ಎಲ್ಲಾ ಅಧ್ಯಯನಗಳು ಕನ್ನಡದಲ್ಲಿಯೇ ಇರಬೇಕು. ಆಡಳಿತದಲ್ಲೂ ಕನ್ನಡ ಬಳಕೆ ಹೆಚ್ಚಾಗಬೇಕು. ತಂತ್ರಜ್ಞಾನ ಸಾಧನಗಳ ಬಳಕೆಯಲ್ಲೂ ಕನ್ನಡವನ್ನು ಹೆಚ್ಚು ಹೆಚ್ಚಾಗಿ ಬಳಸುವಂತಾಗಬೇಕು ಎಂದು ಹೇಳಿದರು.



Join Whatsapp