ಇಂದು ಕನ್ನಡ ರಾಜ್ಯೋತ್ಸವ: ಬೆಳಗಾವಿಯಲ್ಲಿ ಕರಾಳ ದಿನಾಚರಣೆಗೆ ಶಿವಸೇನೆ ಬಣಗಳೆರಡೂ ಬೆಂಬಲ

Prasthutha|

- Advertisement -

ಬೆಳಗಾವಿ: ಇಂದು ಕರ್ನಾಟಕಾದ್ಯಂತ ರಾಜ್ಯೋತ್ಸವ ಆಚರಿಸಲಾಗುತ್ತಿದ್ದು ಕನ್ನಡಿಗರ ಮೊದಲ ಪ್ರಾಶಸ್ತ್ಯದ ಉತ್ಸವ ಇದಾಗಿದೆ. ಇದೇ ಸಮಯದಲ್ಲಿ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುತ್ತಾ ಬೆಳಗಾವಿಯಲ್ಲಿ MES ವತಿಯಿಂದ ಕರಾಳ ದಿನಾಚರಣೆ ಮಾಡಲಾಗುತ್ತದೆ. ಇದಕ್ಕೆ ಮಹಾರಾಷ್ಟ್ರದಲ್ಲಿ ಬಿಜೆಪಿ ಮಿತ್ರ ಪಕ್ಷ ಶಿಂಧೆ ಬಣದ ಶಿವಸೇನೆ ಮತ್ತು ಉದ್ಧವ್ ಠಾಕ್ರೆ ಬಣ ಶಿವಸೇನೆಗಳೆರಡೂ ಬೆಂಬಲ ಸೂಚಿಸಿದೆ. ಜಿಲ್ಲಾಡಳಿತದ ನಿಷೇಧದ ಮಧ್ಯೆ ಕೂಡ MES ಕರಾಳ ದಿನಾಚರಣೆಗೆ ತಯಾರಿ ಮಾಡಿಕೊಂಡಿದೆ.

ಕನ್ನಡ ರಾಜ್ಯೋತ್ಸವ ದಿನದಂದು ಬೆಳಗಾವಿಯಲ್ಲಿ ಎಂಇಎಸ್‌ ಸಂಘಟನೆಯಿಂದ ಕಪ್ಪು ದಿನ ಆಚರಣೆಗೆ ಬಿಜೆಪಿಯೊಂದಿಗೆ ಮೈತ್ರಿಯಲ್ಲಿ ನಡೆಯುತ್ತಿರುವ ಮಹಾರಾಷ್ಟ್ರ ಸರಕಾರವೇ ಸಹಕಾರ ನೀಡುತ್ತಿದ್ದು, ಕರಾಳ ದಿನದಲ್ಲಿ ಮಹಾರಾಷ್ಟ್ರದ ಸಚಿವರು, ಸಂಸದರು ಭಾಗಿಯಾಗುತ್ತಿದ್ದಾರೆ. ಮೂವರು ಸಚಿವರು ಹಾಗೂ ಒಬ್ಬ ಸಚಿವರಿಗೆ ಬೆಳಗಾವಿ ಪ್ರವೇಶವನ್ನು ಜಿಲ್ಲಾಡಳಿತದಿಂದ ನಿಷೇಧಿಸಲಾಗಿದೆ.

- Advertisement -

ಶಿವಸೇನೆ ಉದ್ದವ್ ಠಾಕ್ರೆ ಬಣದಿಂದ ಇಂದು ಬೆಳಗಾವಿ ಚಲೋಗೆ ಕರೆ ನೀಡಲಾಗಿದ್ದು, ಉದ್ಧವ್ ಠಾಕ್ರೆ ಶಿವಸೇನೆ ಬಣದ ಕೊಲ್ಹಾಪುರ ಜಿಲ್ಲಾಧ್ಯಕ್ಷ ವಿಜಯ್ ದೇವಣೆ ಕೊಲ್ಹಾಪುರದಿಂದ ಬೆಳಗಾವಿ ಚಲೋಗೆ ಕರೆ ನೀಡಿದ್ದಾರೆ. ಬೆಳಿಗ್ಗೆ ಎಂಟು ಗಂಟೆಗೆ ಕೊಲ್ಲಾಪುರ ಜಿಲ್ಲೆ ಕಾಗಲ್ ಬಳಿ ಜಮಾವಳಿಯಾಗಲು ಕರೆ ನೀಡಿದ್ದಾರೆ ಎನ್ನಲಾಗಿದೆ.

ಭಗವ ಧ್ವಜದೊಂದಿಗೆ ಕಾಗಲ್ ಲಕ್ಷ್ಮಿ ಟೆಕ್ ಬಳಿ ಆಗಮಿಸುವಂತೆ ಕರೆ ನೀಡಿದ್ದಾರೆ. ಕಾಗಲ್ಲಿಂದ ಬೆಳಗಾವಿ ಜಿಲ್ಲೆ ನಿಪ್ಪಾಣಿ ಹೊರವಲಯದ ಕೋಗನಹಳ್ಳಿ ಟೋಲ್ ಗೇಟ್ ಮಾರ್ಗವಾಗಿ ಬೆಳಗಾವಿಗೆ ಆಗಮಿಸಲಿದ್ದಾರೆ. ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ಈ ಕೋಗನಳ್ಳಿ ಟೋಲ್ ಗೇಟ್ ಇದೆ.

ಇದನ್ನೆಲ್ಲಾ ವಿರೋಧಿಸಿ ಕನ್ನಡ ಪರ ಸಂಘಟನೆಗಳೂ ಪ್ರತಿಭಟನೆ ನಡೆಸುವ ಸಾಧ್ಯತೆಯಿದೆ. ಇದಕ್ಕಾಗಿ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಪೊಲೀಸರೂ ಸೂಕ್ಷ್ಮ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಿದ್ದಾರೆ.



Join Whatsapp