ಚಿತ್ರ ನಟ ‘ಕಲಾತಪಸ್ವಿ’ ರಾಜೇಶ್ ನಿಧನ

Prasthutha|


ಬೆಂಗಳೂರು: ಚಿತ್ರ ನಟ ‘ಕಲಾತಪಸ್ವಿ’ ರಾಜೇಶ್ (82) ಅವರು ಬೆಳಗಿನ ಜಾವ 2.30ರ ಸುಮಾರಿಗೆ ನಿಧನರಾದರು. ತೀವ್ರ ಅನಾರೋಗ್ಯಕ್ಕೊಳಗಾಗಿದ್ದ ಅವರನ್ನು ಇತ್ತೀಚೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು ಎಂದು ಅವರ ಅಳಿಯ ಅರ್ಜುನ್ ಸರ್ಜಾ ತಿಳಿಸಿದ್ದಾರೆ.

- Advertisement -

ಪಾರ್ಥಿವ ಶರೀರವನ್ನು ಇಂದು ಸಂಜೆ 6.30ರವರೆಗೆ ವಿದ್ಯಾರಣ್ಯಪುರದ ಅವರ ನಿವಾಸದಲ್ಲಿ ಇರಿಸಲಾಗುವುದು. ಬಳಿಕ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಶ್ರೀನಿ ಅಭಿನಯದ ‘ಓಲ್ಡ್ಮಾಂಕ್’ ಚಿತ್ರದಲ್ಲಿ ಇತ್ತೀಚೆಗೆ ಅವರು ಅಭಿನಯಿಸಿದ್ದರು. ಆರೋಗ್ಯದ ಕಾರಣದಿಂದ ಕೆಲಕಾಲ ಅವರು ಚಿತ್ರರಂಗದಿಂದ ದೂರ ಉಳಿದಿದ್ದರು.

- Advertisement -

ರಾಜೇಶ್ ಜನಿಸಿದ್ದು ಬೆಂಗಳೂರಿನಲ್ಲಿ. ಅವರ ಮೂಲ ಹೆಸರು ಮುನಿ ಚೌಡಪ್ಪ. ರಂಗಭೂಮಿ ನಟನೆಯ ವೇಳೆ ಅವರು ವಿದ್ಯಾಸಾಗರ್ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದರು. ತಮ್ಮದೇ ಆದ ‘ಶಕ್ತಿ ನಾಟಕ ಮಂಡಳಿ’ಯನ್ನು ಕಟ್ಟಿದ್ದರು. ‘ನಿರುದ್ಯೋಗಿ ಬಾಳು’, ‘ಬಡವನ ಬಾಳು’, ‘ವಿಷ ಸರ್ಪ’, ‘ನಂದಾ ದೀಪ’, ‘ಚಂದ್ರೋದಯ’, ‘ಕಿತ್ತೂರು ರಾಣಿ ಚೆನ್ನಮ್ಮ’ ಅವರು ಅಭಿನಯಿಸಿದ ಪ್ರಮುಖ ನಾಟಕಗಳು. ಈ ನಡುವೆ ಕೆಲಕಾಲ ಅವರು ಲೋಕೋಪಯೋಗಿ ಇಲಾಖೆಯಲ್ಲಿ ಶೀಘ್ರಲಿಪಿ ಮತ್ತು ಬೆರಳಚ್ಚುಗಾರರಾಗಿ ಕೆಲಸ ಮಾಡಿದ್ದರು.

1960ರ ದಶಕದಲ್ಲಿ ಅವರು ‘ವೀರ ಸಂಕಲ್ಪ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. 1968ರಲ್ಲಿ ತೆರೆಕಂಡ ‘ನಮ್ಮ ಊರು’ ಚಿತ್ರದ ಬಳಿಕ ಅವರು ತಮ್ಮ ಹೆಸರನ್ನು ಹೆಸರು ರಾಜೇಶ್ ಎಂದು ಬದಲಾಯಿಸಿಕೊಂಡರು. ಈ ಚಿತ್ರಕ್ಕೆ ಅವರು ಹಿನ್ನೆಲೆ ಗಾಯಕರೂ ಆಗಿದ್ದರು.
‘ಕಪ್ಪು ಬಿಳುಪು’, ‘ಎರಡು ಮುಖ’, ‘ಪುಣ್ಯ ಪುರುಷ’, ‘ಕಾಣಿಕೆ’, ‘ಬೃಂದಾವನ’, ‘ಸುಖ ಸಂಸಾರ’, ‘ದೇವರ ಮಕ್ಕಳು’, ‘ಪೂರ್ಣಿಮಾ’, ‘ನಮ್ಮ ಬದುಕು’, ‘ಭಲೇ ಅದೃಷ್ಟವೋ ಅದೃಷ್ಟ’, ‘ಭಲೇ ಭಾಸ್ಕರ’, ‘ಹೆಣ್ಣು ಹೊನ್ನು ಮಣ್ಣು’, ‘ವಿಷ ಕನ್ಯೆ’, ‘ಕ್ರಾಂತಿ ವೀರ’, ‘ಬಿಡುಗಡೆ’, ‘ಊರ್ವಶಿ’, ‘ದೇವರ ಗುಡಿ’, ‘ಕಾವೇರಿ’, ‘ಬದುಕು ಬಂಗಾರವಾಯಿತು’, ‘ದೇವರ ದುಡ್ಡು’, ‘ಸೊಸೆ ತಂದ ಸೌಭಾಗ್ಯ’, ‘ಚದುರಿದ ಚಿತ್ರಗಳು’, ‘ವಸಂತ ನಿಲಯ’, ‘ಕಲಿಯುಗ’, ‘ದೇವರ ಮನೆ’, ‘ತವರು ಮನೆ’, ‘ತವರು ಮನೆ ಉಡುಗೊರೆ’ ಸೇರಿದಂತೆ ಸುಮಾರು 150ಕ್ಕೂ ಅಧಿಕ ಸಿನಿಮಾಗಳಲ್ಲಿ ರಾಜೇಶ್ ನಟಿಸಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ರಾಜೇಶ್ ಅವರು ನೀಡಿರುವ ಅಪಾರ ಕೊಡುಗೆಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ 2012ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು.

ರಾಜೇಶ್ ಪುತ್ರಿ ಆಶಾರಾಣಿ (ನಟ ಅರ್ಜುನ್ ಸರ್ಜಾ ಪತ್ನಿ) ‘ರಥಸಪ್ತಮಿ’ ಚಿತ್ರದಲ್ಲಿ ನಾಯಕಿಯಾಗಿದ್ದರು. ಆಶಾರಾಣಿ– ಅರ್ಜುನ್ ಸರ್ಜಾ ದಂಪತಿ ಹಾಗೂ ಪುತ್ರಿ ಐಶ್ವರ್ಯಾ ಸರ್ಜಾ ಕೂಡಾ ನಟಿ.



Join Whatsapp