ಮಂಗಳೂರು: ಕಾಣಿಯೂರು ವ್ಯಾಪಾರಿಗಳ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿಪಕ್ಷ ಉಪ ನಾಯಕ, ಶಾಸಕ ಯು.ಟಿ.ಖಾದರ್ ಸರಕಾರವನ್ನು ಒತ್ತಾಯಿಸಿದ್ದಾರೆ.
ಘಟನೆಯ ಬಗ್ಗೆ ಖಂಡನೆ ವ್ಯಕ್ತಪಡಿಸಿದ ಯು.ಟಿ.ಖಾದರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹಾಗೂ ಗೃಹ ಸಚಿವರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿ ಘಟನೆಯನ್ನು ಗಂಭೀರವಾಗಿ ಪರಿಗಣಿಸಲು ಮನವಿ ಮಾಡುತ್ತೇನೆ ಎಂದು ಹೇಳಿದರು.
ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮೀನ ಮೇಷ ಎಣಿಸಿದರೆ ಜಿಲ್ಲೆಯಲ್ಲಿ ಮತ್ತೆ ಇಂಥ ಘಟನೆಗಳು ಮರುಕಳಿಸಬಹುದು. ಆದುದರಿಂದ ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ತೆಗೆದುಕೊಳ್ಳುವ ಕಠಿಣ ಕಾನೂನು ಕ್ರಮವು ಮುಂದೆ ಇಂಥ ಕುಕೃತ್ಯ ನಡೆಸುವವರಿಗೆ ಪಾಠವಾಗಬೇಕೇಂದು ಹೇಳಿದರು.