ನವದೆಹಲಿ: ರೈತರ ಪ್ರತಿಭಟನೆ ಕುರಿತು ಬಿಜೆಪಿ ಸಂಸದೆ, ಬಾಲಿವುಡ್ ನಟಿ ಕಂಗನಾ ರಣಾವತ್ ನೀಡಿದ ಹೇಳಿಕೆ ವಿವಾದವಾಗುತ್ತಿದ್ದಂತೆಯೇ ಬಿಜೆಪಿ ಎಚ್ಚೆತ್ತಕೊಂಡಿದೆ. ಬಿಜೆಪಿ ಕಂಗನಾರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಬಿಜೆಪಿಯ ಪರವಾಗಿ, ಪಕ್ಷದ ಮತ್ತು ಸರ್ಕಾರದ ನೀತಿಗಳ ಕುರಿತು ಹೇಳಿಕೆ ನೀಡಲು ಕಂಗನಾ ರಣಾವತ್ ಅವರಿಗೆ ಅನುಮತಿ ಇಲ್ಲ ಅಥವಾ ಅಧಿಕಾರ ಇಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ. ಭವಿಷ್ಯದಲ್ಲಿ ಅಂತಹ ಹೇಳಿಕೆಗಳನ್ನು ನೀಡದಂತೆ ನಿರ್ದೇಶನ ನೀಡಿದೆ.
ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಬಿಜೆಪಿ ಸಂಸದೆ ಕಂಗನಾ ರಣಾವತ್ ನೀಡಿರುವ ಹೇಳಿಕೆ ಪಕ್ಷದ ಅಭಿಪ್ರಾಯವಲ್ಲ. ಸಂಸದೆಯ ರೈತ ವಿರೋಧಿ ಹೇಳಿಕೆ ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದೆ.
ಕಂಗನಾ ರಣಾವತ್ ಅವರಿಗೆ ಭವಿಷ್ಯದಲ್ಲಿ ಭಾರತೀಯ ಜನತಾ ಪಕ್ಷದ ಪರವಾಗಿ ಇಂತಹ ಯಾವುದೇ ಹೇಳಿಕೆಗಳನ್ನು ನೀಡದಂತೆ ನಿರ್ದೇಶನ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಭಾರತೀಯ ಜನತಾ ಪಕ್ಷವು ‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ ಮತ್ತು ಸಬ್ಕಾ ಪ್ರಯಾಸ್’ ಮತ್ತು ಸಾಮಾಜಿಕ ಸಾಮರಸ್ಯದ ತತ್ವಗಳನ್ನು ಅನುಸರಿಸಲು ಬದ್ಧವಾಗಿದೆ” ಎಂದು ಬಿಜೆಪಿ ಹೇಳಿದೆ.
ದೇಶದಲ್ಲಿ ಬಾಂಗ್ಲಾದೇಶದಂತಹ ಅರಾಜಕತೆ ಸೃಷ್ಟಿಸಲು ರೈತರ ಪ್ರತಿಭಟನೆಯಲ್ಲಿ ಯೋಜನೆ ರೂಪಿಸಲಾಗಿತ್ತು ಎಂದು ಕಂಗನಾ ರಣಾವತ್ ಹೇಳಿಕೆ ನೀಡಿದ್ದರು.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ರಾಹುಲ್ ಗಾಂಧಿ, ರೈತರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿರುವ ಮೋದಿ ಸರ್ಕಾರದ ಪ್ರಚಾರ ಯಂತ್ರ ನಿರಂತರವಾಗಿ ರೈತರನ್ನು ಅವಮಾನಿಸುತ್ತಿದೆ ಎಂದು ಹೇಳಿದ್ದಾರೆ.