ಕನಕಪುರ: ಗುಂಡು ಹಾರಿಸಿ ರೌಡಿ ಶೀಟರ್‌ಗಳನ್ನು ಬಂಧಿಸಿದ ಪೊಲೀಸರು

Prasthutha|

ಕನಕಪುರ: ತಲೆಮರೆಸಿಕೊಂಡು ಆರ್ಭಟಿಸುತ್ತಿದ್ದ ಇಬ್ಬರು ರೌಡಿ ಶೀಟರ್‌ಗಳಿಗೆ ಗುಂಡು ಹಾರಿಸಿ ಸೆರೆ ಹಿಡಿದ ಘಟನೆ ಇಂದು ನಡೆದಿದೆ. ಕಗ್ಗಲಿಪುರದ ಸಮೀಪ ಅವರನ್ನು ಸೆರೆ ಹಿಡಿಯಲಾಗಿದೆ.

- Advertisement -

ಜುಲೈ 22ರಂದು ಕನಕಪುರ ಪಟ್ಟಣದ ಮುಳಗಲ ಪ್ರದೇಶದಲ್ಲಿ ಜಿಪಂ ಮಾಜಿ ಅಧ್ಯಕ್ಷನ ಮನೆಗೆ ನುಗ್ಗಿ ದಾಂಧಲೆ ನಡೆಸಿ ಯುವಕನ ಕೈ ಕತ್ತರಿಸಿ ಮನೆಯವರ ಮೇಲೆ ಹಲ್ಲೆ ನಡೆಸಿದ್ದ ಕುಖ್ಯಾತ ರೌಡಿ ಶೀಟರ್‌ ಹಾಗೂ ಗಡಿ ಪಾರಾಗಿದ್ದ ಹರ್ಷ ಅಲಿಯಾಸ್‌‍ ಕೈಮಾ ಮತ್ತು ಕರುಣೇಶ್‌ ಅಲಿಯಾಸ್‌‍ ಕಣ್ಣನ್ ಬಂಧಿತರು.

ತಲೆಮರೆಸಿಕೊಂಡಿದ್ದ ಇವರಿಗೆ ಅಕ್ಕಪಕ್ಕದ ಜಿಲ್ಲೆಗಳಲ್ಲೂ ಹುಡುಕಾಟ ನಡೆಸಲಾಗಿತ್ತು. ಆದರೆ, ಸಿಕ್ಕಿರಲಿಲ್ಲ. ಪೊಲೀಸರ ಬಗ್ಗೆ ಮಾಹಿತಿ ಪಡೆದು ಒಂದೇ ಪ್ರದೇಶದಲ್ಲಿರದೆ ಹಲವಾರು ಹಳ್ಳಿಗಳಿಗೆ ಸಂಚರಿಸಿ ತಲೆಮರೆಸಿಕೊಂಡಿದ್ದರು.

- Advertisement -

ಕಳೆದ ರಾತ್ರಿ ಕಗ್ಗಲಿಪುರದ ವ್ಯಾಲಿ ಶಾಲೆ ಬಳಿ ಇವರಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಕನಕಪುರ ಟೌನ್‌ ಸರ್ಕಲ್‌ ಇನ್ಸಪೆಕ್ಟರ್‌ ಮಿಥುನ್‌ ಶಿಲ್ಪಿ ಹಾಗೂ ಪಿಎಸ್‌‍ಐ ಮನೋಹರ್‌ ಮತ್ತವರ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದರು.

ಇಂದು ಮುಂಜಾನೆ ಅವರಿರುವ ಸ್ಥಳಕ್ಕೆ ತಲುಪಿ ಮೊದಲು ಇಬ್ಬರು ಕಾನ್ಸ್‌ಟೆಬಲ್‌ಗಳು ಅವರನ್ನು ಹಿಡಿಯಲು ಹೋಗಿದ್ದ ವೇಳೆ ಇಬ್ಬರು ಲಾಂಗ್‌ ಮತ್ತು ಡ್ರ್ಯಾಗರ್‌ನಿಂದ ಅವರ ಮೇಲೆಯೇ ಹಲ್ಲೆ ನಡೆಸಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾರೆ. ತಕ್ಷಣ ಎಚ್ಚೆತ್ತ ಪೊಲೀಸರು ಅವರನ್ನು ಸುತ್ತುವರೆದು ಶರಣಾಗುವಂತೆ ಸೂಚಿಸಿ ಗಾಳಿಯಲ್ಲಿ ಗುಂಡು ಹಾರಿಸಿದರೂ ಅದನ್ನು ಲೆಕ್ಕಿಸದೆ ಅವರ ಮೇಲೆಯೇ ದಾಳಿ ಮುಂದಾದಾಗ ಆತರಕ್ಷಣೆಗಾಗಿ ಇನ್ಸ್‌ಪೆಕ್ಟರ್ ಮತ್ತು ಸಬ್ ಇನ್ಸ್‌ಪೆಕ್ಟರ್ ಗುಂಡು ಹಾರಿಸಿದ್ದಾರೆ. ಗುಂಡುಗಳು ಹರ್ಷನ ಬಲಗಾಲು ಮತ್ತು ಎಡಗಾಲಿಗೆ ತಗುಲಿದ್ದರೆ, ಮತ್ತೊಬ್ಬ ಆರೋಪಿ ಕಣ್ಣನಿಗೆ ಎಡಗಾಲಿಗೆ ಗುಂಡು ತಗುಲಿದೆ. ತಕ್ಷಣ ಅವರನ್ನು ವಶಕ್ಕೆ ಪಡೆದು ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ಇಬ್ಬರು ಕಾನ್ಸ್‌ಟೆಬಲ್ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.



Join Whatsapp