ಬೆಂಗಳೂರು: ಬೆಂಗಳೂರಿನ ವೋಲ್ವೋ ಗ್ರೂಪ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಧ್ಯಕ್ಷರಾದ ಕಮಲಾ ಬಾಲಿ ಅವರು ಸಿಐಐ ದಕ್ಷಿಣ ವಿಭಾಗಕ್ಕೆ 2023-24ನೇ ಸಾಲಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕಮಲಾ ಬಾಲಿ ಅವರು ಸಿಐಐ ಜೊತೆ ಹಿಂದಿನಿಂದಲೂ ನಿಕಟ ಸಂಬಂಧ ಹೊಂದಿದ್ದರು. 2022-23ನೇ ಸಾಲಿನಲ್ಲಿ ಸಿಐಐ ದಕ್ಷಿಣ ವಿಭಾಗದ ಉಪಾಧ್ಯಕ್ಷರಾಗಿ ಹಾಗೂ 2017-18ನೇ ಸಾಲಿನಲ್ಲಿ ಸಿಐಐ ಕರ್ನಾಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 2020-21ರಲ್ಲಿ ಸಿಐಐ-ಎಸ್ಆರ್ನ ಉತ್ಪಾದನಾ ಉಪಸಮಿತಿಯ ಅಧ್ಯಕ್ಷರಾಗಿ ಹಾಗೂ 2019-20ರಲ್ಲಿ ಸಿಐಐ ದಕ್ಷಿಣ ವಿಭಾಗದ ಉದ್ಯಮಿಗಳು ಹಾಗೂ ಸ್ಟಾರ್ಟ್ ಅಪ್ ಫೋರಂನ ಸಹ-ಅಧ್ಯಕ್ಷರಾಗಿದ್ದರು. ಸಿಐಐ ನ್ಯಾಷನಲ್ ಕೌನ್ಸಿಲ್’ನ ಸದಸ್ಯರಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ.
ಬಾಲಿ ಅವರು ವಿವಿಧ ಪ್ರತಿಷ್ಟಿತ ಸಂಸ್ಥೆಗಳ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ವೋಲ್ವೋ ಫೈನಾನ್ಶಿಯಲ್ ಸರ್ವಿಸಸ್ ಹಾಗೂ ಇನ್ವೆಸ್ಟ್ ಕರ್ನಾಟಕ ಫೋರಂನ ಬೋರ್ಡ್ ಸದಸ್ಯರಾಗಿ, ಭಾರತ ಸರ್ಕಾರದ ಡಿಪಾರ್ಟ್ಮೆಂಟ್ ಆಫ್ ಸ್ಪೇಸ್ ಬೋರ್ಡ್’ನ ಸ್ವತಂತ್ರ ನಿರ್ದೇಶಕರಾಗಿ, ಗಾಂಧಿನಗರದ ಇಂಡಿಯನ್ ಇನ್ಸ್ಟಿಟ್ಯೂಟ್’ನ ಬೋರ್ಡ್ ಆಫ್ ಗವರ್ನರ್ಸ್’ನ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕೊಯಂಬತ್ತೂರಿನ ಚಂದ್ರ ಟೆಕ್ಸ್ ಟೈಲ್ಸ್ ಪ್ರೈ.ಲಿ.ನ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಆರ್.ನಂದಿನಿ ಸಿಐಐ ದಕ್ಷಿಣ ವಿಭಾಗಕ್ಕೆ 2023-24ನೇ ಸಾಲಿನ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರು ಪ್ರಸ್ತುತ ಸಿಐಐ ದಕ್ಷಿಣ ವಿಭಾಗ ಕೌನ್ಸಿಲ್’ನ ಸದಸ್ಯರಾಗಿ ಹಾಗೂ ಸಿಐಐ ನ್ಯಾಷನಲ್ ಕೌನ್ಸಿಲ್ ಟಾಸ್ಕ್ ಫೋರ್ಸ್ (ಗ್ರಾಮೀಣಾಭಿವೃದ್ಧಿ ಹಾಗೂ ವಲಸೆ ಕಾರ್ಮಿಕರ ಅಭಿವೃದ್ಧಿ) ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2022-23ರಲ್ಲಿ ಇವರು ಶಿಕ್ಷಣ ಉಪವಿಭಾಗದ ನಿಕಟಪೂರ್ವ ಅಧ್ಯಕ್ಷರಾಗಿ, 2010-11ರಲ್ಲಿ ಸಿಐಐ ತಮಿಳುನಾಡಿನ ನಿಕಟಪೂರ್ವ ಅಧ್ಯಕ್ಷರಾಗಿ ಹಾಗೂ ಸಿಐಐ ಇಂಡಿಯನ್ ವುಮೆನ್ ನೆಟ್ವರ್ಕ್’ನ ಮಾಜಿ ಚೇಯರ್ಮೆನ್ ಆಗಿ ಕಾರ್ಯನಿರ್ವಹಿಸಿದ್ದರು.
ನಂದಿನಿ ಅವರು ಕಾಗ್ನಿಝೆಂಟ್ ಸಂಸ್ಥೆಯ ಸಿಎಸ್ಆರ್ ವಿಭಾಗವಾದ ಕಾಗ್ನಿಝೆಂಟ್ ಫೌಂಡೇಶನ್ ಬೋರ್ಡ್ನ ನಿರ್ದೇಶಕರಾಗಿದ್ದಾರೆ. ಜೊತೆಗೆ ತಮಿಳುನಾಡು ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಕಾರ್ಪೊರೇಶನ್ ಲಿಮಿಟೆಡ್ನ ಸ್ವತಂತ್ರ ನಿರ್ದೇಶಕರಾಗಿ ಹಾಗೂ ತಿರುಚನಾಪಳ್ಳಿಯ ಎನ್ಐಟಿ ಬೋರ್ಡ್ ಆಫ್ ಗವರ್ನರ್ಸ್’ನ ಮಾಜಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.