ಕಲ್ಯಾಣ ಕರ್ನಾಟಕ ಅಭಿವೃದ್ಧಿ, ನಂಜುಡಪ್ಪ ವರದಿಯ ಅನುಷ್ಠಾನ ವಿಚಾರದಲ್ಲಿ ಎಲ್ಲ ಸರ್ಕಾರಗಳಿಂದ ನಿರ್ಲಕ್ಷ್ಯ: ಅಫ್ಸರ್ ಕೊಡ್ಲಿಪೇಟೆ

Prasthutha|

ರಾಯಚೂರು: ಇಲ್ಲಿಯವರೆಗೆ ಆಡಳಿತ ನಡೆಸಿದ ಯಾವುದೇ ಪಕ್ಷದ ಸರ್ಕಾರವಾಗಲಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಯಾವುದೇ ರೀತಿ ಪ್ರಾಮುಖ್ಯತೆ ಕೊಟ್ಟಿಲ್ಲ. ಹಾಗಾಗಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಇಂದಿಗೂ ಕೂಡ ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲಿಯೇ ಅತ್ಯಂತ ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿ ಸೇರಿಕೊಂಡಿವೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್’ಡಿಪಿಐ) ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಹೇಳಿದ್ದಾರೆ.

- Advertisement -


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ ಹೆಸರಿನಲ್ಲಿ ಸಾಕಷ್ಟು ಯೋಜನೆಗಳನ್ನು ಬಜೆಟ್ ಮೂಲಕ ಘೋಷಿಸುತ್ತಾರೆ. ಆದರೆ ಅವು ಯಾವುದು ಕೂಡ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರುವುದಿಲ್ಲ. ಘೋಷಣೆಯಾದ ಅನುದಾನಕ್ಕಿಂತ ಸಾಕಷ್ಟು ಕಡಿಮೆ ಪ್ರಮಾಣದ ಅನುದಾನವನ್ನು ಬಿಡುಗಡೆ ಮಾಡಲಾಗುತ್ತದೆ. ಅದರ ಜೊತೆಗೆ ಬಿಡುಗಡೆಯಾಗುವ ಅಲ್ಪಸ್ವಲ್ಪ ಮೊತ್ತವೂ ಭ್ರಷ್ಟಾಚಾರದಲ್ಲಿ ಕರಗಿ ಹೋಗುತ್ತದೆ. ಹೀಗಿರುವಾಗ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಸಾಧ್ಯವಾಗುವುದಾದರೂ ಹೇಗೆ? ಎಂದು ಅಫ್ಸರ್ ಕೊಡ್ಲಿಪೇಟೆ ಪ್ರಶ್ನಿಸಿದರು.


ದೇಶದ ಇತಿಹಾಸದಲ್ಲಿ ಕಂಡು ಕೇಳರಿಯದ 40% ಕಮಿಷನ್ ಪಡೆಯುವ ಅತ್ಯಂತ ಭ್ರಷ್ಟ ಸರ್ಕಾರ ಸದ್ಯ ಅಸ್ತಿತ್ವದಲ್ಲಿರುವ ಬೊಮ್ಮಾಯಿ ಅವರ ನೇತೃತ್ವದ ಕರ್ನಾಟಕ ಸರ್ಕಾರವಾಗಿದೆ. ಒಂದೆಡೆ ಭ್ರಷ್ಟಾಚಾರ, ಇನ್ನೊಂದೆಡೆ ಬಿಜೆಪಿಯ ಮೂಲ ತಂತ್ರವಾದ ಧರ್ಮ ದ್ವೇಷವನ್ನು ಬಿತ್ತುವ ಮೂಲಕ ಸಮಾಜವನ್ನು ಇಬ್ಬಾಗವಾಗಿಸುವ ಷಡ್ಯಂತ್ರದ ನಡುವೆ ಕರ್ನಾಟಕ ತತ್ತರಿಸಿ ಹೋಗಿದೆ ಎಂದು ಹೇಳಿದರು.

- Advertisement -


ಬಿಜೆಪಿ ಸರ್ಕಾರವೇ ಪೋಷಿಸಿಕೊಂಡು ಬಂದಿರುವ ಗೂಂಡಾಪಡೆಗಳು ಧರ್ಮದ ಹೆಸರಿನಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಅಲ್ಲೋಲಕಲ್ಲೋಲ ಮಾಡಿವೆ. ದಿನ ಬೆಳಗಾದರೆ ಮುಸ್ಲಿಮರ ವಿರುದ್ಧ ಒಂದಲ್ಲ ಒಂದು ರೀತಿಯ ಪಿತೂರಿ ಹೂಡಿ ಅವರ ವಿರುದ್ಧ ಜನರಲ್ಲಿ ದ್ವೇಷ ಬಿತ್ತುವ ಕುಕೃತ್ಯದಲ್ಲಿ ತೊಡಗಿಸಿಕೊಂಡಿರುತ್ತವೆ. ಹಿಜಾಬ್, ಹಲಾಲ್, ಆಜಾನ್ ಮುಸ್ಲಿಮರ ವ್ಯಾಪಾರ ಎಂದು ನಿರಂತರವಾಗಿ ರಾಜ್ಯವನ್ನು ಕೋಮು ದ್ವೇಷದ ವಾತಾವರಣದಲ್ಲಿಯೇ ಇಡುವಂತಹ ಪ್ರಯತ್ನ ಮಾಡುತ್ತವೆ. ಇದರ ಜೊತೆಗೆ ಅನೈತಿಕ ಪೊಲೀಸ್’ಗಿರಿಯಂತಹ ಕಾನೂನುಬಾಹಿರ ದಾಳಿಗಳ ಮೂಲಕ ಅಲ್ಪಸಂಖ್ಯಾತ ಸಮುದಾಯದಲ್ಲಿ ಭಯದ ವಾತಾವರಣವನ್ನು ಸೃಷ್ಟಿ ಮಾಡುತ್ತಿರುತ್ತವೆ. ಇಂತಹ ಸಮಾಜಘಾತುಕ ಶಕ್ತಿಗಳಿಗೆ ಕೋಮುವಾದಿ ಬಿಜೆಪಿ ಪಕ್ಷ ಮತ್ತು ಅದರ ನಾಯಕರು ಬಹಿರಂಗವಾಗಿಯೇ ಬೆಂಬಲಕ್ಕೆ ನಿಲ್ಲುತ್ತಾರೆ. ಆ ಮೂಲಕ ಹಿಂದೂ ಮತಗಳ ಧ್ರುವೀಕರಣಕ್ಕೆ ಮುಂದಾಗುತ್ತಾರೆ ಎಂದು ಅಫ್ಸರ್ ಬಿಜೆಪಿ ಸರ್ಕಾದ ವಿರುದ್ಧ ಪ್ರಹಾರ ಮಾಡಿದರು.

ಈ ರೀತಿಯಾಗಿ ಎಲ್ಲ ರಂಗದಲ್ಲಿಯೂ ಸೋತಿರುವಂತಹ ಬಿಜೆಪಿ ಸರ್ಕಾರ ಚುನಾವಣೆಗಳು ಸಮೀಪಿಸುತ್ತಿದ್ದಂತೆ ತನ್ನ ಕೋಮುವಾದಿ ಚಟುವಟಿಕೆಗಳನ್ನು ಮತ್ತಷ್ಟು ತೀವ್ರಗೊಳಿಸಿದೆ ಎಂದು ಅಪ್ಸರ್ ಅವರು ಆರೋಪಿಸಿದರು.
ರಾಯಚೂರು ಜಿಲ್ಲೆಯ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದ ಅವರು ಜಿಲ್ಲೆಯ ಕೆಲವು ಪ್ರಮುಖ ಸಮಸ್ಯೆಗಳ ಬಗ್ಗೆ ವಿವರಿಸಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರು.
ರಾಯಚೂರು ಜಿಲ್ಲೆಯ ಪ್ರಮುಖ ಸಮಸ್ಯೆಗಳು:

  1. ಶುದ್ಧ ಕುಡಿಯುವ ನೀರು, ಧೂಳು ಮುಕ್ತ ರಸ್ತೆಗಳು, ನೈರ್ಮಲ್ಯ ಮತ್ತು ಚರಂಡಿ ಮತ್ತು ಬೀದಿ ದೀಪಗಳ ಸಮಸ್ಯೆಯಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಜಿಲ್ಲಾಡಳಿತ, CMC, ಮತ್ತು ಚುನಾಯಿತ ಪ್ರತಿನಿಧಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಅನಾರೋಗ್ಯಕರ ವಾತಾವರಣದಿಂದಾಗಿ ರಾಯಚೂರಿನ ಜನರು ಮೊದಲು ರಾಯಚೂರಿನಲ್ಲಿ ಜಿಕಾ ವೈರಸ್’ಗೆ ತುತ್ತಾದರು.
  2. ರಾಯಚೂರು ನಗರದ ಜನರಿಗೆ ರಿಮ್ಸ್ ಮತ್ತು ಒಪೆಕ್ ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆಯಲ್ಲಿ ಉತ್ತಮ ಸೌಲಭ್ಯಗಳು ಸಿಗುತ್ತಿಲ್ಲ.
  3. ರಾಯಚೂರಿಗೆ ಬರಬೇಕಿದ್ದ ಐಐಟಿ ಸಂಸ್ಥೆಯನ್ನು ರಾಯಚೂರು ನಗರ ಕಳೆದುಕೊಂಡಿದೆ. ಆದರೆ ಚುನಾಯಿತ ಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಹುಬ್ಬಳ್ಳಿ ಧಾರವಾಡಕ್ಕೆ ವರ್ಗಾವಣೆಯಾಗಿದೆ. ಇದೀಗ ರಾಯಚೂರು ಏಮ್ಸ್ ಆಸ್ಪತ್ರೆಗೆ ಆಗ್ರಹಿಸುತ್ತಿದ್ದರೂ ಕೇಂದ್ರ ಸರಕಾರ ರಾಯಚೂರನ್ನು ನಿರ್ಲಕ್ಷ್ಯಿಸಿ ಮತ್ತೆ ಹುಬ್ಬಳ್ಳಿ ಧಾರವಾಡಕ್ಕೆ ಸ್ಥಳಾಂತರಿಸುತ್ತಿದೆ.
  4. ರಾಯಚೂರಿನಲ್ಲಿ ಭಾರೀ ವಾಹನಗಳ ಓಡಾಟದಿಂದ ಅನೇಕ ಅಪಘಾತಗಳನ್ನು ಕಂಡಿರುವ ಜನರಿಗೆ ರಾಯಚೂರು ನಗರಕ್ಕೆ ಹೊರ ವರ್ತುಲ ರಸ್ತೆಯ ಅಗತ್ಯವಿದೆ.
  5. ರಾಯಚೂರಿನಲ್ಲಿ ಅತ್ಯಂತ ಭ್ರಷ್ಟ ನಗರಸಭೆ ಅಧಿಕಾರಿಗಳಿಂದ ಅಭಿವೃದ್ಧಿ ಕುಂಟಿತ ..ಹೀಗೆ ಸಾಕಷ್ಟು ಸಮಸ್ಯೆಗಳು ಜಿಲ್ಲೆಯನ್ನು ಭಾದಿಸುತ್ತಿವೆ ಎಂದು ಅಫ್ಸರ್ ಅವರು ವಿವರಿಸಿದರು.
    ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಮತ್ತು ಸದೃಢ, ಸಮೃದ್ಧ, ಸೌಹಾರ್ದಯುತ ಕರ್ನಾಟಕಕ್ಕಾಗಿ ಮುಂಬರುವ ಚುನಾವಣೆಯಲ್ಲಿ ಮತದಾರರು ಎಸ್.ಡಿ.ಪಿ.ಐ ಪಕ್ಷಕ್ಕೆ ಒಂದು ಅವಕಾಶ ನೀಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
    ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಖಜಾಂಚಿ ಸೈಯದ್ ಇಸ್ಹಾಕ್ ಹುಸೇನ್ ( ಖಾಲಿದ್ ), ರಾಯಚೂರು ಜಿಲ್ಲಾಧ್ಯಕ್ಷ ತೌಸೀಫ್ ಅಹಮದ್ ಮತ್ತು ಪಕ್ಷದ ಇತರ ನಾಯಕರು ಉಪಸ್ಥಿತರಿದ್ದರು.


Join Whatsapp