ಕಲಬುರಗಿ: ಬಾಲಕಿ ಮೇಲೆ ಅತ್ಯಾಚಾರಿಗೆ 20 ವರ್ಷ ಜೈಲು

Prasthutha|

ಕಲಬುರಗಿ: ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ತಾಲ್ಲೂಕಿನ ಪಾಳಾ ಗ್ರಾಮದ ಅನಿಲ್ ಭೀಮರಾಯ ಮೇಲಿನಕೇರಿ ಎಂಬಾತನಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ವಿಶೇಷ ಪೋಕ್ಸೊ) ನ್ಯಾಯಾಲಯ 20 ವರ್ಷ ಜೈಲು ಹಾಗೂ ₹ 20 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.

- Advertisement -

ಬಾಲಕಿಯ ಪೋಷಕರು ಮಗಳಿಗೆ ಚುಡಾಯಿಸದಂತೆ ತಿಳಿ ಹೇಳುತ್ತಿದ್ದು, ಬಿಟ್ಟುಬಿಡುವ ಬದಲಿಗೆ ಅನಿಲ್ 2022ರ ಫೆಬ್ರುವರಿ 10ರಂದು ಬಾಲಕಿಯನ್ನು ತನ್ನ ಮನೆಯ ಹಿತ್ತಲಿಗೆ ಕರೆಸಿಕೊಂಡು ಜೀವ ಬೆದರಿಕೆ ಹಾಕಿ ಅತ್ಯಾಚಾರ ಮಾಡಿದ್ದನು. ಮುಂದೆಯೂ ಹಲವು ಬಾರಿ ಅತ್ಯಾಚಾರ ನಡೆಸಿದ್ದ ಕುರಿತು ಬಾಲಕಿಯ ಪೋಷಕರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಬಸವರಾಜ ತೇಲಿ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ವಿಶೇಷ ಪೋಕ್ಸೊ) ನ್ಯಾಯಾಲಯ-ಎಫ್‌ಟಿಎಸ್ಸಿ-1 ನ್ಯಾಯಾಧೀಶ ಯಮನಪ್ಪ ಬಮ್ಮಣಗಿ, ಆತನ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ್ದಾರೆ.

- Advertisement -

ನೊಂದ ಬಾಲಕಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ತೀರ್ಪು ಪ್ರಕಟವಾದ ತಿಂಗಳೊಳಗಾಗಿ ₹ 7 ಲಕ್ಷ ಪರಿಹಾರ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ.

ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರ ಬಿ. ತುಪ್ಪದ ವಾದ ಮಂಡಿಸಿದ್ದರು.



Join Whatsapp