ಕಲಬುರಗಿ: ಪ್ಯಾಲೆಸ್ತೀನ್ ಮೇಲೆ ನಿರಂತರ ಇಸ್ರೇಲ್ ದಾಳಿ ಮಾಡುತ್ತಿದ್ದು, ಗಾಝಾ ಪಟ್ಟಿಯಲ್ಲಿ ಸಾವಿರಾರು ಮಕ್ಕಳು ಒಳಗೊಂಡಂತೆ ಅಪಾರ ಸಂಖ್ಯೆಯ ಪ್ಯಾಲೆಸ್ತೀನಿಯರನ್ನು ಕೊಲ್ಲಲಾಗುತ್ತಿದೆ. ಇಂತಹ ಅಮಾನವೀಯ ಘಟನೆಯನ್ನು ತಡೆಯಲು ಜಾಗತಿಕ ನಾಯಕರೆಂದು ಕರೆದುಕೊಳ್ಳುತ್ತಿರುವ ರಾಷ್ಟ್ರಗಳು ಮುಂದಾಗುತ್ತಿಲ್ಲ ಎಂದು ವಿವಿಧ ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಇಸ್ರೇಲ್ ಹಾಗೂ ಅದರ ಬೆಂಬಲಿತ ರಾಷ್ಟ್ರಗಳ ವಿರುದ್ಧ ಘೋಷಣೆ ಕೂಗಿದ್ದಾರೆ.
ಪ್ರತಿಭಟನಕಾರರು ಹಲವಾರು ಪೋಸ್ಟರ್ಗಳನ್ನು ಹಿಡಿದುಕೊಂಡಿದ್ದರು. ಪ್ಯಾಲೆಸ್ತೀನಿಯರ ನರಮೇಧ ನಿಲ್ಲಿಸಿ, ಪ್ಯಾಲೆಸ್ಟೀನಿಯರ ಉಳಿವಿಗಾಗಿ ಯುದ್ಧ ನಿಲ್ಲಲಿ ಶಾಂತಿ ನೆಲೆಸಲಿ, ಪ್ಯಾಲೆಸ್ತೀನ್ ಮುಕ್ತಗೊಳಿಸಿ, ಗಾಝಾದಿಂದ ಇಸ್ರೇಲ್ ಹಿಂದಕ್ಕೆ ಸರಿಯಲಿ, ಬಾಂಬ್ಗಳ ದಾಳಿ ನಿಲ್ಲಿಸಿ’, ಸ್ಟಾಪ್ ವಾರ್ ಕ್ರೈಮ್’… ಹೀಗೆ ಹಲವು ಪೋಸ್ಟರ್ಗಳು ಕಂಡುಬಂದವು.
ಹಿಂದೆ ಜಪಾನ್ನ ಹಿರೋಶಿಮಾ ಮತ್ತು ನಾಗಸಾಕಿ ಮೇಲೆ ನಡೆದಿದ್ದ ಅಣುಬಾಂಬ್ ದಾಳಿಗಿಂತ ಮೂರು ಪಟ್ಟು ಹೆಚ್ಚಿನ ದಾಳಿ ಇಸ್ರೇಲ್ ಗಾಝಾದಲ್ಲಿ ನಡೆಸುತ್ತಿದೆ. ಇಸ್ರೇಲ್ನ ಈ ಅಮಾನುಷ್ಯ ಕೃತ್ಯ ಮುಂದಿನ ಸಾವಿರ ವರ್ಷಗಳವರೆಗೂ ಕಪ್ಪು ಚುಕ್ಕೆಯಾಗಿ ಇತಿಹಾಸದ ನೆನಪಿನಲ್ಲಿ ಉಳಿಯಲಿದೆ. ಇಸ್ರೇಲ್ನ ಈ ಅಪರಾಧವನ್ನು ಇಡೀ ಜಗತ್ತು ಒಕ್ಕೊರಲಿನಿಂದ ಖಂಡಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ನಿರಂತರ ಬಾಂಬ್ ದಾಳಿ ಮಾಡುವುದರೊಂದಿಗೆ. ನೀರು, ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಿ, ಆಸ್ಪತ್ರೆಗಳೂ ಕೆಲಸ ಮಾಡದಂತಹ ವಾತಾವರಣ ನಿರ್ಮಿಸಿ ಇಸ್ರೇಲ್ ಮಾನವೀಯತೆಯ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಜಗತ್ತಿನ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕ ಸೇರಿದಂತೆ ಇಂಗ್ಲೆಂಡ್, ಫ್ರಾನ್ಸ್ನಂತಹ ರಾಷ್ಟ್ರಗಳು ಇಸ್ರೇಲ್ಗೆ ಸಪೋರ್ಟ್ ಕೊಡುತ್ತಿವೆ. ವಿಶ್ವಸಂಸ್ಥೆಯು ತನ್ನ ಹೊಣೆಗಾರಿಕೆಯನ್ನು ಮರೆತಿದೆ. ಅರೇಬಿಯನ್ ರಾಷ್ಟ್ರಗಳು ಕೂಡಲೇ ಪ್ಯಾಲೆಸ್ತೀನಿಯರ ನೆರವಿಗೆ ಧಾವಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ.