ಶಾಂತಿ ಸುವ್ಯವಸ್ಥೆ, ಕೋಮು ಸೌಹಾರ್ದತೆಗೆ ಧಕ್ಕೆ ಸಾಧ್ಯತೆ ಹಿನ್ನೆಲೆ: ಪ್ರಮೋದ್ ಮುತಾಲಿಕ್, ಚೈತ್ರಾ ಕುಂದಾಪುರಗೆ ಪ್ರವೇಶ ನಿರ್ಬಂಧ

Prasthutha|

ಕಲಬುರಗಿ: ಕೋಮು ಸೌಹಾರ್ದತೆ ಹಾಗೂ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಫೆಬ್ರವರಿ 27ರಿಂದ ಮಾರ್ಚ್‌ 3ರವರೆಗೆ ಶ್ರೀರಾಮ ಸೇನೆಯ ರಾಷ್ಟ್ರೀಯ ಘಟಕದ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಕುಂದಾಪುರದ‌ ಚೈತ್ರಾ ಕುಂದಾಪುರಗೆ ಕಲಬುರಗಿ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಯಶವಂತ‌ ವಿ. ಗುರುಕರ್ ಆದೇಶ ಹೊರಡಿಸಿದ್ದಾರೆ.

- Advertisement -

ಶ್ರೀರಾಮ ಸೇನೆ ರಾಜ್ಯ ಘಟಕದ ಅಧ್ಯಕ್ಷ ಆಂದೋಲಾದ ಸಿದ್ದಲಿಂಗ ಸ್ವಾಮೀಜಿಗೆ ಫೆಬ್ರವರಿ 27ರಿಂದ ಮಾರ್ಚ್ 3ರವರೆಗೆ ಆಳಂದ ತಾಲೂಕು ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿದೆ.

ಆಳಂದ ಪಟ್ಟಣದ ಲಾಡ್ಲೆ‌ ಮಶಾಕ್ ದರ್ಗಾದಲ್ಲಿ‌ ಮಾರ್ಚ್ 1ರಂದು ಸಂದಲ್ ಮತ್ತು ಶಬ್-ಏ-ಬರಾತ್ ಕಾರ್ಯಕ್ರಮ ಇದ್ದು, ಅದೇ ದಿನ‌ ಮಹಾಶಿವರಾತ್ರಿ ಇರುವುದರಿಂದ ದರ್ಗಾದಲ್ಲಿರುವ ಶಿವಲಿಂಗದ ಶುದ್ಧೀಕರಣ ಕಾರ್ಯಕ್ರಮಕ್ಕೆ ಸಿದ್ದಲಿಂಗ‌ ಸ್ವಾಮೀಜಿ ಕರೆ ನೀಡಿದ್ದಲ್ಲದೆ ಫೆ.27ಕ್ಕೆ ಆಳಂದ‌ ಚಲೋ ಕಾರ್ಯಕ್ರಮಕ್ಕೆ ಕರೆ‌ ನೀಡಿದ್ದರು. ಆದ್ದರಿಂದ ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಎಂದು ಜಿಲ್ಲಾ ‍ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಅವರು ಜಿಲ್ಲಾಧಿಕಾರಿ ಅವರಿಗೆ ವರದಿ ನೀಡಿದ್ದರು. ಈ ವರದಿ ಆಧರಿಸಿ ಪ್ರಮೋದ್ ಮುತಾಲಿಕ್, ಚೈತ್ರಾ ಕುಂದಾಪುರಗೆ ಜಿಲ್ಲೆ ಪ್ರವೇಶಿಸದಂತೆ ಮತ್ತು ಸಿದ್ದಲಿಂಗ ಸ್ವಾಮೀಜಿ ಆಳಂದ ತಾಲ್ಲೂಕು ಪ್ರವೇಶಿಸದಂತೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.



Join Whatsapp