ಕೆ.ಆರ್.ಪುರಂ: ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಯುವಕ; ಎರಡು ದಿನಗಳ‌ ಬಳಿಕ ಮೃತದೇಹ ಪತ್ತೆ

Prasthutha|

ಬೆಂಗಳೂರು: ಕೆ.ಆರ್.ಪುರಂನಲ್ಲಿ ಭಾರೀ ಮಳೆಗೆ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತದೇಹವು ಎರಡು ದಿನಗಳ‌ ಕಾರ್ಯಾಚರಣೆಯ ಬಳಿಕ ಪತ್ತೆಯಾಗಿದೆ.

- Advertisement -

ಮೃತ ಯುವಕನನ್ನು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ‘ಅದರಂತೆ’ ಗ್ರಾಮದ ಮಿಥುನ್ (26) ಎಂದು ಗುರುತಿಸಲಾಗಿದೆ.

ಕೇಂಬ್ರಿಡ್ಜ್ ಕಾಲೇಜು ಪಕ್ಕದ ರಾಜಕಾಲುವೆಯಲ್ಲಿ ಶವ ಸಿಕ್ಕಿ ಹಾಕಿಕೊಂಡಿದ್ದು, ಸತತ 40 ಗಂಟೆಗಳ ಕಾಲ ಎಸ್​ಡಿಆರ್​ಎಫ್​ ತಂಡ ರಾಜಕಾಲುವೆಯಿಂದ ಶವವನ್ನು ಹೊರತೆಗೆದಿದೆ. ಕೆ.ಆರ್.ಪುರಂನ ಘಟನಾ ಸ್ಥಳದಿಂದ ಸುಮಾರು 1.5 ಕಿ.ಮೀ ದೂರದಲ್ಲಿ ಮೃತದೇಹ ಸಿಕ್ಕಿದೆ. ಮೃತದೇಹವನ್ನು  ಈಸ್ಟ್ ಪಾಯಿಂಟ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ನೀಡಲಾಗಿದೆ.

- Advertisement -

ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದ ಮಿಥುನ್ ಜೂ.17ರ ತಡರಾತ್ರಿ12.30 ರ ವೇಳೆ ಕೊಚ್ಚಿ ಹೋಗುತ್ತಿದ್ದ ಬೈಕ್ ಉಳಿಸಲು ಹೋಗಿ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ. ನಿನ್ನೆ ಬೆಳಿಗ್ಗೆಯಿಂದ ಶೋಧ ನಡೆಸಲಾಗಿದ್ದು, ಮಳೆ ಹಿನ್ನೆಲೆಯಲ್ಲಿ ಎಸ್​ಡಿಆರ್​ಎಫ್​ ಸಿಬ್ಬಂದಿ ರಾತ್ರಿ ಶೋಧಕಾರ್ಯ ನಿಲ್ಲಿಸಿ ಇಂದು ಬೆಳಿಗ್ಗೆಯಿಂದ ಮತ್ತೆ ಕಾರ್ಯಾಚರಣೆ ಮುಂದುವರೆಸಿ ಪತ್ತೆಹಚ್ಚಿದೆ.

ಯುವಕನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.

Join Whatsapp