ಪ್ರಭಾಕರ್ ಭಟ್ ಕೇಸ್ ಗೆ ಮರುಜೀವ : ದೂರುದಾರರ ಪರವಾಗಿ ಹಿರಿಯ ವಕೀಲ ಎಸ್ ಬಾಲನ್ ಅರ್ಜಿ !

Prasthutha|

- Advertisement -

ಶ್ರೀರಂಗಪಟ್ಟಣದಲ್ಲಿ ಮಹಿಳಾ ವಿರೋಧಿ ದ್ವೇಷ ಭಾಷಣ ಮಾಡಿದ್ದ ಕಲ್ಲಡ್ಕ ಪ್ರಭಾಕರ ಭಟ್ ಪ್ರಕರಣಕ್ಕೆ ಮರುಜೀವ ಬಂದಿದೆ. ಮುಸ್ಲಿಂ ಮಹಿಳೆಯರನ್ನು ಅವಮಾನಿಸಿ ಭಾಷಣ ಮಾಡಿದ್ದ ಕಲ್ಲಡ್ಕ ಪ್ರಭಾಕರ ಭಟ್, ಮುಂದುವರೆದು ಹಿಂದೂ ಮುಸ್ಲಿಂ ಧರ್ಮಗಳನ್ನು ಎತ್ತಿಕಟ್ಟುವ ಕೆಲಸ ಮಾಡಿದ್ದರು. ಈ ಬಗ್ಗೆ ಸಾಮಾಜಿಕ ಹೋರಾಟಗಾರ್ತಿ ನಜ್ಮಾ ನಝೀರ್ ಚಿಕ್ಕನೇರಳೆ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದರು. ಭಟ್ ಬಂಧನಕ್ಕೆ ಒತ್ತಡಗಳು ಹೆಚ್ಚುತ್ತಿದ್ದಾಗಲೇ ಶ್ರೀರಂಗಪಟ್ಟಣ ನ್ಯಾಯಾಲಯ ಭಟ್ ಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿತ್ತು.

ಇಂದು ಶ್ರೀರಂಗಪಟ್ಟಣ ನ್ಯಾಯಾಲಯಕ್ಕೆ ಹಿರಿಯ ವಕೀಲ ಎಸ್ ಬಾಲನ್ ಅವರು CR.P.C SECTION 301, 302 ಅಡಿಯಲ್ಲಿ ವಕಾಲತ್ತು ಹಾಕಿದ್ದಾರೆ. ಎಫ್ಐಆರ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ಬಳಿಕ ದೂರುದಾರರಿಗೆ ನ್ಯಾಯಾಲಯದ ದಿನನಿತ್ಯದ ಕಲಾಪಗಳಿಗೆ ಸಂಬಂಧ ಇರುವುದಿಲ್ಲ. ಎಫ್ಐಆರ್ ಅನ್ನು ನ್ಯಾಯಾಲಯದಲ್ಲಿ ಆರೋಪಿ ವಿರುದ್ದ ಕರ್ನಾಟಕ ಸರ್ಕಾರ ಎಂದಷ್ಟೇ ಉಲ್ಲೇಖಿಸಲಾಗುತ್ತದೆ. ಆರೋಪಿಯ ಜಾಮೀನು ಅರ್ಜಿಯನ್ನು ವಿರೋಧಿಸಲು ಸರ್ಕಾರಕ್ಕೆ ಅವಕಾಶ ಇದೆಯೇ ಹೊರತು ದೂರುದಾರರಿಗೆ ಇರುವುದಿಲ್ಲ. ಆದರೆ ಹಿರಿಯ ವಕೀಲ ಎಸ್ ಬಾಲನ್ ಅವರು ಸುಪ್ರಿಂ ಕೋರ್ಟ್ ನ ಹಲವು ತೀರ್ಪುಗಳನ್ನು ಉಲ್ಲೇಖಿಸಿ ಶ್ರೀರಂಗಪಟ್ಟಣ ನ್ಯಾಯಾಲಯದಲ್ಲಿ ದೂರುದಾರರ ಪರವಾಗಿ ವಕಾಲತ್ತು ಹಾಕಿದ್ದಾರೆ.

- Advertisement -

2023 ರ ಡಿಸೆಂಬರ್ 28 ರಂದು ಕಲ್ಲಡ್ಕ ಪ್ರಭಾಕರ ಭಟ್ಟರು ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಸರ್ಕಾರಿ ವಕೀಲರು ವಿಸ್ತೃತ ಆಕ್ಷೇಪಣೆ ಸಲ್ಲಿಸಲು ಸಮಯ ಕೇಳದೇ ಮೌಖಿಕವಾಗಿ ಆಕ್ಷೇಪಣೆಯನ್ನು ಅಂದೇ ಸಲ್ಲಿಸಿದ್ದರಿಂದ ನ್ಯಾಯಾಲಯ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿತ್ತು. ಮೂಲ ಅರ್ಜಿಯ ವಿಚಾರಣೆಯನ್ನು 2024 ರ ಜನವರಿ 03ಕ್ಕೆ ಮುಂದೂಡಿತ್ತು. ಇಂದು ಅರ್ಜಿದಾರರ ಪರವಾಗಿ ಖ್ಯಾತ ಜನಪರ ವಕೀಲ ಎಸ್ ಬಾಲನ್ ಮತ್ತು ಮಂಡ್ಯದ ಜನಪರ ವಕೀಲ ಲಕ್ಷ್ಮಣ ಚೀರನಹಳ್ಳಿ ವಕಾಲತ್ತು ಸಲ್ಲಿಸಿದ್ದಾರೆ. ನ್ಯಾಯಾಲಯವು ವಿಚಾರಣೆಯನ್ನು ಜನವರಿ 05 ಕ್ಕೆ ಮುಂದೂಡಿದೆ.

Join Whatsapp