ತುರ್ತು ನಿರ್ಗಮನ ದ್ವಾರ ತೆರೆದಿದ್ದ ತೇಜಸ್ವಿ ಸೂರ್ಯ ಕ್ಷಮೆಯಾಚಿಸಿದ್ದಾರೆ: ಸಂಸದನ ಪರ ವಿಮಾನಯಾನ ಸಚಿವ ಬ್ಯಾಟಿಂಗ್

Prasthutha|

ದೆಹಲಿ: ಕಳೆದ ತಿಂಗಳು ತೇಜಸ್ವಿ ಸೂರ್ಯ ಇಂಡಿಗೋ ವಿಮಾನದ ತುರ್ತು ನಿರ್ಗಮನ ದ್ವಾರವನ್ನು ಅಪ್ಪಿ ತಪ್ಪಿ ತೆರೆದಿದ್ದು, ನಂತರ ಕ್ಷಮೆಯಾಚಿಸಿದ್ದಾರೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.

- Advertisement -

ವಿಮಾನವು ಹಾರಲು ಸಿದ್ಧತೆ ನಡೆಸುತ್ತಿದ್ದಾಗ ಬೋರ್ಡಿಂಗ್ ಪ್ರಕ್ರಿಯೆಯಲ್ಲಿ ಪ್ರಯಾಣಿಕನೊಬ್ಬ ತನ್ನ ವಿಮಾನ 6E 7339 (ಚೆನ್ನೈ ನಿಂದ ತಿರುಚಿರಾಪಳ್ಳಿಗೆ ಹೋಗುತ್ತಿದ್ದ ವಿಮಾನದ)ದ ತುರ್ತು ನಿರ್ಗಮನ ದ್ವಾರವನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಆಕಸ್ಮಿಕವಾಗಿ ತೆರೆದಿದ್ದು, ಆನಂತರ ಆ ಪ್ರಯಾಣಿಕ ಕ್ಷಮೆಯಾಚಿಸಿದ್ದಾರೆ ಎಂದು ಇಂಡಿಗೋ ವಿಮಾನಯಾನ ಸಂಸ್ಥೆ ಡಿಸೆಂಬರ್ 10 ರಂದು ತಿಳಿಸಿದೆ. ಹೀಗೆ ತುರ್ತು ನಿರ್ಗಮನ ದ್ವಾರ ತೆರೆದ ಪ್ರಯಾಣಿಕ ತೇಜಸ್ವಿ ಸೂರ್ಯ ಎಂದು ಘಟನೆ ನಡೆದು ಒಂದು ತಿಂಗಳ ನಂತರ ವಿಮಾನಯಾನ ಸಚಿವರು ಖಚಿತಪಡಿಸಿದ್ದಾರೆ.

“ಎಚ್ಚರಿಕೆಯಿಂದ ಇರುವುದು ಮುಖ್ಯ. ವಾಸ್ತವ ನೋಡಿ. ಅಪ್ಪಿ ತಪ್ಪಿ ಬಾಗಿಲು ತೆರೆದಿದ್ದಾರೆ. ಎಲ್ಲಾ ತಪಾಸಣೆಗಳನ್ನು ಮಾಡಿದ ನಂತರನೇ ವಿಮಾನವನ್ನು ಟೇಕ್ ಆಫ್ ಮಾಡಲು ಅನುಮತಿಸಲಾಗಿದೆ. ಅದಕ್ಕಾಗಿ ಅವರು ಕ್ಷಮೆ ಕೇಳಿದ್ದಾರೆ ಎಂದು ಮಾಧ್ಯಮದವರಲ್ಲಿ ಮಾತನಾಡಿದ ಸಿಂಧಿಯಾ ಹೇಳಿದ್ದಾರೆ. ಕಟ್ಟುನಿಟ್ಟಾದ ಇಂಜಿನಿಯರಿಂಗ್ ತಪಾಸಣೆಯ ನಂತರವೇ ವಿಮಾನವು ತನ್ನ ಗಮ್ಯಸ್ಥಾನವಾದ ತಿರುಚಿರಾಪಳ್ಳಿಗೆ ಹೊರಟಿದ್ದರಿಂದ ವಿಮಾನವು ಎರಡು ಗಂಟೆಗಳ ಕಾಲ ವಿಳಂಬವಾಯಿತು ಎಂದು ಅಧಿಕಾರಿಗಳು ಹೇಳುತ್ತಾರೆ.

- Advertisement -

“ಪ್ರಯಾಣಿಕ ಈ ಕ್ರಮಕ್ಕಾಗಿ ತಕ್ಷಣವೇ ಕ್ಷಮೆಯಾಚಿಸಿದ್ದಾರೆ. SOP (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್) ಪ್ರಕಾರ, ಘಟನೆಯನ್ನು ದಾಖಲಿಸಲಾಗಿದೆ. ವಿಮಾನವು ಕಡ್ಡಾಯ ಎಂಜಿನಿಯರಿಂಗ್ ತಪಾಸಣೆಗೆ ಒಳಗಾಯಿತು, ಇದು ವಿಮಾನದ ನಿರ್ಗಮನದಲ್ಲಿ ವಿಳಂಬಕ್ಕೆ ಕಾರಣವಾಯಿತು” ಎಂದು ಇಂಡಿಗೋ ಮಂಗಳವಾರ ಹೇಳಿಕೆ ನೀಡಿದ್ದರೂ ಪ್ರಯಾಣಿಕರ ಹೆಸರು ಬಹಿರಂಗಪಡಿಸಲಿಲ್ಲ.
ತೇಜಸ್ವಿ ಸೂರ್ಯ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಅವರೊಂದಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು.
ವಿರೋಧ ಪಕ್ಷಗಳು ತೇಜಸ್ವಿ ಸೂರ್ಯರನ್ನು ಗುರಿಯಾಗಿಸಿ ಟ್ರೋಲ್ ಮಾಡಿದ್ದು ಇಂಡಿಗೋ ಪ್ರಯಾಣಿಕರ ಹೆಸರನ್ನು ಏಕೆ ಬಹಿರಂಗಪಡಿಸಿಲ್ಲ ಎಂದು ಪ್ರಶ್ನಿಸಿವೆ. ಆಟ ಆಡುವ ಮಕ್ಕಳಿಗೆ ಜವಾಬ್ದಾರಿ ನೀಡಿದರೆ ಏನಾಗುತ್ತದೆ ಎಂಬುದಕ್ಕೆ ತೇಜಸ್ವಿ ಸೂರ್ಯ ಉದಾಹರಣೆ. ವಿಮಾನದ ತುರ್ತು ನಿರ್ಗಮನದ ಬಾಗಿಲು ತೆರೆಯಲು ಯತ್ನಿಸಿದ ಮಕ್ಕಳ ಕಿಡಿಗೇಡಿತನದ ಕೃತ್ಯ ಬೆಳಕಿಗೆ ಬಂದಿದೆ. ಪ್ರಯಾಣಿಕರ ಪ್ರಾಣದೊಂದಿಗೆ ಚೇಷ್ಟೆ ಏಕೆ?” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

“ಸಂಸದರ ಉದ್ದೇಶವೇನು? ಅನಾಹುತ ಸೃಷ್ಟಿಸುವ ಯೋಜನೆಯೇ? ಕ್ಷಮೆಯಾಚಿಸಿದ ನಂತರ ಅವರನ್ನು ಹಿಂಬದಿಯ ಸೀಟಿಗೆ ಏಕೆ ವರ್ಗಾಯಿಸಲಾಯಿತು,” ಎಂದು ಪ್ರಶ್ನಿಸಿದ ಕಾಂಗ್ರೆಸ್, ಟೇಕ್-ಆಫ್ ನಂತರ “ತಮಾಷೆ” ಆಗಿದ್ದರೆ ಅನಾಹುತಕ್ಕೆ ಯಾರನ್ನು ದೂಷಿಸುತ್ತೀರಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದೆ.

Join Whatsapp