#JusticeForJasmeen ಮತ್ತು ಸುಹೈಲ್ ಕಂದಕ್ ಬಂಧನ: ಮೆಡಿಕಲ್ ಮಾಫಿಯಾದ ಕಬಂಧ ಬಾಹುಗಳಲ್ಲಿ ಮಂಗಳೂರು ?

Prasthutha|

✍️ ಅಬೂ ಸೋಹಾ

- Advertisement -

ಈ ಘಟನೆ ನಡೆದಿದ್ದು ಮೇ 19ರಂದು. ಮಂಗಳೂರಿನ ಪ್ರತಿಷ್ಠಿತ ಇಂಡಿಯಾನಾ ಆಸ್ಪತ್ರೆಯಲ್ಲಿ. ಗಡಿ ಭಾಗದ ಮಂಜೇಶ್ವರದ ಕೆದುಂಬಾಡಿಯ ತಾಯಿ ಮತ್ತು ಮಗ ಕೋವಿಡ್ ಚಿಕಿತ್ಸೆಗೆಂದು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೊದಲಿಗೆ ತಾಯಿ ಮೃತಪಟ್ಟಾಗ ಅವರ ಬಿಲ್ ಸುಮಾರು 8 ಲಕ್ಷದ ಹತ್ತಿರವಿತ್ತು. ಮೃತರ ಕುಟುಂಬ ಅದಕ್ಕೆ ಯಾವುದೇ ತಕರಾರೆತ್ತದೆ ಪಾವತಿಸಿತ್ತು. 3-4 ದಿನಗಳ ಬಳಿಕ ಮಗನೂ ಮೃತಪಡುತ್ತಾರೆ. ಮಗನ ಚಿಕಿತ್ಸಾ ವೆಚ್ಚ 6 ಲಕ್ಷದ ಆಸುಪಾಸಿನಲ್ಲಿತ್ತು. ಆಸ್ಪತ್ರೆ ಅವರಲ್ಲಿ 2.40 ಲಕ್ಷ ಕಡಿತ ಮಾಡಿ ಉಳಿದ ಮೊತ್ತ ಪಾವತಿಸುವಂತೆ ಹೇಳಿತ್ತು. ಬಿಲ್ಲನ್ನು ಮತ್ತಷ್ಟು ಕಡಿತಗೊಳಿಸುವಂತೆ ಆ ವೇಳೆ ಅಲ್ಲಿದ್ದ ಯುವ ಕಾಂಗ್ರೆಸ್ ನ ಸುಹೈಲ್ ಕಂದಕ್ ಒತ್ತಾಯಿಸಿದಾಗ, ಆಸ್ಪತ್ರೆ ಸಿಬ್ಬಂದಿ ಮತ್ತು ಕಂದಕ್ ಮಧ್ಯೆ ವಾಗ್ವಾದವೇರ್ಪಟ್ಟಿದೆ. ಕೊನೆಗೆ ಕರಾರು ಪತ್ರಕ್ಕೆ ಸಹಿ ಹಾಕಿದ ಕುಟುಂಬ ಅಲ್ಪ ದಿನಗಳ ಬಳಿಕ ಮೊತ್ತವನ್ನು ಪಾವತಿಸುವುದಾಗಿ ಹೇಳಿ ಮೃತದೇಹವನ್ನು ತಮ್ಮೂರಿಗೆ ಕೊಂಡೊಯ್ದಿದೆ. ಸಿಬ್ಬಂದಿಗಳ ಜೊತೆಗೆ ಮಾತಿನ ಸಮರ ನಡೆಸಿದ್ದ ಸುಹೈಲ್ ಕಂದಕ್ ವಿರುದ್ಧ ಪೊಲೀಸ್ ದೂರು ನೀಡಲಾಗಿತ್ತು. ಠಾಣೆಗೆ ಹೋಗಿದ್ದ ಸುಹೈಲ್ ಕಂದಕ್ ಮುಚ್ಚಳಿಕೆಯೊಂದಕ್ಕೆ ಸಹಿ ಹಾಕಿದ ಬಳಿಕ ಎಲ್ಲವೂ ತಣ್ಣಗಾಗಿತ್ತು.

ಹಾಗೆಯೇ ಹೆರಿಗೆಗೆಂದು ಕೊಲ್ಲಿ ರಾಷ್ಟ್ರದಿಂದ ತವರಿಗೆ ಬಂದಿದ್ದ ಜಾಸ್ಮಿನ್ ಎಂಬ ಹೆಣ್ಣುಮಗಳು ತನ್ನ ಎಂದಿನ ಕನ್ಸಲ್ಟಿಂಗ್ ಡಾಕ್ಟರ್ ವಿಜಯ ಕ್ಲಿನಿಕ್ ನ ಡಾ. ಪ್ರಿಯಾ ಬಲ್ಲಾಳ್ ಅವರನ್ನು ಸಂಪರ್ಕಿಸುತ್ತಾರೆ. ಕೋವಿಡ್ ಟೆಸ್ಟ್, ಅದು ಇದೂ ಎನ್ನುತ್ತಾ ಹೊಟ್ಟೆ ನೋವಿನಿಂದ ಚಡಪಡಿಸುತ್ತಿದ್ದ 8 ತಿಂಗಳ ತುಂಬು ಗರ್ಭಿಣಿ ಜಾಸ್ಮೀನ್ ರನ್ನು ಮನೆಯಲ್ಲೇ ಇರುವಂತೆ ಡಾಕ್ಟರ್ ಸೂಚಿಸುತ್ತಾರೆ. ಆದರೆ ಅತಿ ಅಗತ್ಯ ಕಾಲದಲ್ಲಿ ಡಾ.ಪ್ರಿಯಾ ಅವರ ಚಿಕಿತ್ಸೆ ದೊರೆಯದೇ ಇದ್ದಾಗ ಗತ್ಯಂತರವಿಲ್ಲದೆ ಜಾಸ್ಮಿನ್ ನಗರದ ಬೇರೆ ಆಸ್ಪತ್ರೆಯತ್ತ ಮುಖ ಮಾಡುತ್ತಾರೆ. ಆದರೆ ಈ ಗರ್ಭಿಣಿ ಮಹಿಳೆ, ಪ್ರಿಯಾ ಅವರ ರೋಗಿ ಎಂದು ಅರಿಯುತ್ತಲೇ ಪ್ರತಿಯೊಂದು ಆಸ್ಪತ್ರೆಯಲ್ಲೂ ಒಂದೊಂದು ಸಬೂಬು ಹೇಳಿ ಇವರಿಗೆ ಚಿಕಿತ್ಸೆ ನಿರಾಕರಿಸಿರುವುದನ್ನು ಸ್ವತಃ ಜಾಸ್ಮೀನ್ ಅವರೇ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.

- Advertisement -

ಹೀಗೆ ಪತ್ರಿಕಾಗೋಷ್ಠಿಯಲ್ಲಿ ಅವರ ಕುಟುಂಬವೇ ಹೇಳಿದಂತೆ, ಅಂದಿನ 24 ಗಂಟೆಗಳ ಅವಧಿಯೊಳಗೆ ಈ 8 ತಿಂಗಳ ಗರ್ಭಿಣಿ ಜಾಸ್ಮೀನ್ ಬರೋಬ್ಬರಿ 6 ಆಸ್ಪತ್ರೆ ಮತ್ತು 9 ಆಂಬ್ಯುಲನ್ಸ್ ನಲ್ಲಿ ಸುತ್ತಾಡುತ್ತಾರೆ. ಕೊನೆಗೆ ಕೋವಿಡ್ ಪಾಸಿಟಿವ್ ವರದಿ ಬಂದೂ ಅದು ಹೇಗೋ ಹೆರಿಗೆ ಪ್ರಕ್ರಿಯೆಗಳು ನಡೆಯುತ್ತದೆ. ಆದರೆ ಜಾಸ್ಮೀನ್ ಗಾದ ಅನ್ಯಾಯದ ವಿರುದ್ಧ ಆಸ್ಪತ್ರೆಗಳಲ್ಲಿ ಮಾತನಾಡಿದ್ದ ಜಾಸ್ಮೀನ್ ಕುಟುಂಬದ ವಿರುದ್ಧವೇ ಪೊಲೀಸ್ ದೂರು ದಾಖಲಾಗಿ, ಆ ಕುಟುಂಬದ ಕೆಲವರಿಗೆ ಕೋವಿಡ್ ಪಾಸಿಟಿವ್ ಇದ್ದರೂ ರಾತ್ರೋ ರಾತ್ರಿ ಮನೆ – ಫ್ಲಾಟ್ ಎನ್ನದೆ ಪೊಲೀಸ್ ದಾಳಿ ನಡೆಸಿ ಇಬ್ಬರನ್ನು ಬಂಧಿಸಲಾಗುತ್ತದೆ. ಉಳಿದವರಿಗಾಗಿ ಹಲವು ಮನೆಗಳ ಮೇಲೆ ದಾಳಿಯಾಗುತ್ತದೆ. ಇದೇ ವೇಳೆ ಕದ್ರಿ ಠಾಣೆಯಲ್ಲಿ ವೈದ್ಯರ ವಿರುದ್ಧ ಜಾಸ್ಮೀನ್ ಕುಟುಂಬ ನೀಡಿದ್ದ ದೂರನ್ನು ಪೊಲೀಸರು ಸ್ವೀಕರಿಸಿ ಅದಕ್ಕೊಂದು NC ಕೊಟ್ಟಿದ್ದಾರೆ. ಆದರೆ ಅದಕ್ಕೆ FIR ಮಾಡಿರಲಿಲ್ಲ.

ತನ್ನ ಸೂಚನೆಯನ್ನು ರೋಗಿ ಪಾಲಿಸಿಲ್ಲ ಅಥವಾ ತನ್ನ ಮಾತಿಗೆ ಗೌರವ ನೀಡಿಲ್ಲವೆಂದು ತನ್ನ ಅಹಂಗೆ ಪೆಟ್ಟು ಬಿದ್ದ ವೈದ್ಯೆಯೋರ್ವಳು  ರೋಗಿಯೊಬ್ಬರಿಗೆ ನಗರದಲ್ಲಿ ತನ್ನನ್ನು ಬಿಟ್ಟು ಬೇರೆ ವೈದ್ಯರಲ್ಲಿ ಚಿಕಿತ್ಸೆ ದೊರೆಯಬಾರದು ಎಂದು ನಿರ್ಧರಿಸುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದಾರೆಯೇ? ಒಂದು ವೇಳೆ ಹಾಗಾಗಿದ್ದರೆ ಇದು ನಿಜಕ್ಕೂ ಅಪಾಯದ ಮುನ್ಸೂಚನೆಯಾಗಿದೆ. ಇದನ್ನು ಬುದ್ಧಿವಂತರ ಜಿಲ್ಲೆಯ ಜನರು ಇನಾದರೂ ಅರ್ಥ ಮಾಡಿಕೊಳ್ಳಬೇಕು. ಇಂದು ಜಾಸ್ಮೀನ್ ಗಾದ ಸ್ಥಿತಿ ನಾಳೆ ನಮಗೆ ಯಾರಿಗಾದರೂ ಎದುರಾಗಬಹುದು. ರೋಗಿಗಳಿಗೆ ತಾನು ಯಾವ ವೈದ್ಯರನ್ನು ಮತ್ತು ಆಸ್ಪತ್ರೆಯನ್ನು ಸಂಪರ್ಕಿಸಬೇಕು ಎಂದು ನಿರ್ಧರಿಸುವ ಸ್ವಾತಂತ್ರ್ಯವಿದೆ. ಅದಕ್ಕೆ ಅಡ್ಡಿಪಡಿಸುವ ವೈದ್ಯರ ಮನಸ್ಥಿತಿ ಮತ್ತು ವೃತ್ತಿಯ ಬಗ್ಗೆ ಅನುಮಾನ ಪಡಲೇಬೇಕಾಗುತ್ತದೆ. ರೋಗಿಯ ಸ್ವಾತಂತ್ರ್ಯಕ್ಕೆ ತೊಡಕಾಗುತ್ತದೆ ಎಂದಾದರೆ ಅಲ್ಲಿ ವ್ಯವಸ್ಥಿತ ಮಾಫಿಯಾ ಕೆಲಸ ಮಾಡುತ್ತಿದೆ ಎಂದೇ ಅರ್ಥ.

ಈ ಮಾಫಿಯಾ ಅಸ್ತಿತ್ವದಲ್ಲಿದೆ ಎಂದು ಹೇಳಲು ಮತ್ತಷ್ಟು ಕಾರಣಗಳಿವೆ. ಮೇ 19 ರಂದು ಇಂಡಿಯಾನಾ ಆಸ್ಪತ್ರೆಯಲ್ಲಿ ನಡೆದ ಘಟನೆಗೆ ಜೂನ್ 4 ರಂದು ಅಂದರೆ ಬರೋಬ್ಬರಿ 16 ದಿನಗಳ ಬಳಿಕ ಸುಹೈಲ್ ಕಂದಕ್ ರನ್ನು ಪೊಲೀಸರು ಬಂಧಿಸಿದ್ದಾರೆ. ಅದೂ ಮುಚ್ಚಳಿಕೆ ಬರೆದುಕೊಟ್ಟು ಸುಖಾಂತ್ಯಗೊಂಡ ಪ್ರಕರಣವೊಂದಕ್ಕೆ ಸಂಬಂಧಿಸಿ. ಇಲ್ಲೂ ಕೂಡಾ ಈ ಮೆಡಿಕಲ್ ಮಾಫಿಯಾದ ಕಾಣದ ಕೈಗಳು ಕೆಲಸ ಮಾಡಿವೆ. ಜಾಸ್ಮೀನ್ ಕುಟುಂಬ ಜೂನ್ 3 ರಂದು  IMA ವಿರುದ್ಧ ಪೊಲೀಸ್ ಕಮಿಷನರ್ ಗೆ ದೂರು ನೀಡಿತ್ತು. ಆಗ ಎಚ್ಚೆತ್ತುಕೊಂಡ ಈ “ಅನೈತಿಕ ಒಗ್ಗಟ್ಟಿನ” ಗುಂಪು ನಗರದ ಆಸ್ಪತ್ರೆಗಳಲ್ಲಿ ಹಿಂದೆ ನಡೆದಂತಹ ಯಾವುದಾದರು ಹಳೆ ಪ್ರಕರಣಗಳನ್ನು ಪಟ್ಟಿ ಮಾಡಿ ತೆಗೆದಾಗ ಸಿಕ್ಕಿದ್ದೇ ಮೇ 19 ರಂದು ಇಂಡಿಯಾನಾ ಆಸ್ಪತ್ರೆಯಲ್ಲಿ ಸುಹೈಲ್ ಕಂದಕ್ ಅವರು ನಡೆಸಿದ್ದ ವಾಗ್ವಾದದ ಘಟನೆ. ಆದರೆ ಆ ಪ್ರಕರಣವಾದರೋ ಅದಾಗಲೇ ಮುಚ್ಚಿ ಹೋಗಿತ್ತು. ಆದರೆ ಅದು ಹೇಗೋ ಒತ್ತಡಗಳನ್ನು ಹೇರಿ ಇಂಡಿಯಾನಾ ಆಸ್ಪತ್ರೆಯ ನರ್ಸ್ ಒಬ್ಬರ ಮೂಲಕ ಸುಹೈಲ್ ಕಂದಕ್ ಅವರ ವಿರುದ್ಧ ಹಳೆ ಪ್ರಕರಣಕ್ಕೆ ಹೊಸದಾಗಿ  ದೂರು ದಾಖಲಿಸುವಂತೆ ಮಾಡುವಲ್ಲಿ ಯಶಸ್ವಿಯಾಯಿತು.

ಇಲ್ಲಿನ ಉದ್ದೇಶ ಸ್ಪಷ್ಟ, ಈ ಮಾಫಿಯಾದ ವಿರುದ್ಧ ಯಾರೂ ಧ್ವನಿ ಎತ್ತಬಾರದು. ಹಾಗೊಂದು ವೇಳೆ ಯಾರಾದರೂ ಬಾಲ ಬಿಚ್ಚಿದರೆ ಸುಹೈಲ್ ಕಂದಕ್ ರ ಬಂಧನದ ಮೂಲಕ ಇಡೀ ಜಿಲ್ಲೆಯ ಜನರನ್ನು ಬೆದರಿಸಿ ನಿಲ್ಲಿಸುವ ಪ್ರಯತ್ನ ಇದರಲ್ಲಿ ನಡೆದಿರುವುದು ಸ್ಪಷ್ಟವಾಗಿದೆ.  ಇನ್ನೊಂದು ಅಚ್ಚರಿಯ ಸಂಗತಿಯೇನೆಂದರೆ ಸಂತ್ರಸ್ತೆಯ ಪರವಾಗಿ ನಿಲ್ಲಬೇಕಾದ ಜಿಲ್ಲೆಯ ಬಹುತೇಕ ಮಾಧ್ಯಮಗಳು ಆರೋಪಿ ಸ್ಥಾನದಲ್ಲಿರುವವರ ಪರ ಬ್ಯಾಟ್ ಬೀಸಿ, ಹೆಚ್ಚಿನ ಆದ್ಯತೆಯಲ್ಲಿ ಅವರ ಸುದ್ದಿ ಪ್ರಕಟಿಸಿರುವುದು, ಸಂತ್ರಸ್ತೆ ಅನುಭವಿಸಿದ ನೋವನ್ನು ಸಮಾಜಕ್ಕೆ ತಿಳಿಸದೆ ಮುಚ್ಚಿಟ್ಟಿರುವುದು ಮಾಧ್ಯಮದ ನೈತಿಕತೆಯನ್ನೇ ಪ್ರಶ್ನಿಸುವಂತಾಗಿದೆ.

ಈ ವ್ಯವಸ್ಥಿತ ಮಾಫಿಯಾ ಯಾರನ್ನೂ ಬೇಕಾದರೂ ಆಪೋಷನ ಪಡೆಯಬಹುದಾಗಿದೆ. ಹೀಗಿರುವಾಗ ಜಿಲ್ಲೆಯ ಜನರು ಇದರ ವಿರುದ್ಧ ಧ್ವನಿ ಎತ್ತಬೇಕಾಗಿದೆ. ಇಂದು ಜಾಸ್ಮೀನ್ ಗೆದುರಾದ ಪರಿಸ್ಥಿತಿ ನಾಳೆ ಇನ್ಯಾರಿಗೋ ಎದುರಾಗಬಹುದು. ವೈದ್ಯಕೀಯ ರಂಗದಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಮತ್ತು ಹೆಸರುವಾಸಿಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಇದು ನಿಜಕ್ಕೂ ಕಪ್ಪು ಚುಕ್ಕೆಯಾಗಿದೆ.  ಹೀಗಿರುವಾಗ ಈ ಮಾಫಿಯಾದ ಕೋಟೆಯನ್ನು ಸಾರ್ವಜನಿಕರ ಒಗ್ಗಟ್ಟಿನ ಮತ್ತು ಪ್ರಜ್ಞಾವಂತಿಕೆಯ ಮೂಲಕ ಒಡೆದು ಧ್ವಂಸಗೊಳಿಸಬೇಕಾಗಿದೆ. ಇಲ್ಲವೆಂದಾದಲ್ಲಿ ಇದು ಇನ್ನಷ್ಟು ಮುಂದುವರಿದು ಜಿಲ್ಲೆಯ ಜನರಿಗೆ ಕಂಟಕವಾಗುವುದರಲ್ಲಿ ಸಂಶಯವಿಲ್ಲ.



Join Whatsapp