ನವದೆಹಲಿ : ನ್ಯಾಯಾಂಗದ ವಿರುದ್ಧದ ಹೇಳಿಕೆಗಳಿಗಾಗಿ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ (ಸಿಜೆಐ), ರಾಜ್ಯಸಭಾ ಸದಸ್ಯ ರಂಜನ್ ಗೊಗೊಯಿ ವಿರುದ್ಧದ ನ್ಯಾಯಾಂಗ ನಿಂದನೆ ದಾಖಲಿಸುವ ಸಂಬಂಧ ಅನುಮತಿ ನೀಡಲು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ನಿರಾಕರಿಸಿದ್ದಾರೆ.
“ದೇಶದ ನ್ಯಾಯಾಂಗ ವ್ಯವಸ್ಥಯೇ ಕುಸಿದಿದೆ. ನ್ಯಾಯ ಬೇಡಿ ವ್ಯಕ್ತಿಯೊಬ್ಬ ಕೋರ್ಟ್ ಮೆಟ್ಟಿಲೇರಿದಾಗ ಸಕಾಲದಲ್ಲಿ ತೀರ್ಪು ಹೊರಬೀಳುವ ಸಾಧ್ಯತೆ ಈಗ ಕಡಿಮೆ” ಎಂಬರ್ಥದಲ್ಲಿ ನ್ಯಾ. ಗೊಗೊಯಿ ಇತ್ತೀಚೆಗೆ ಹೇಳಿದ್ದರು. ಹೀಗಾಗಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸಬೇಕು ಎಂದು ಕೋರಿ ಸಾಮಾಜಿಕ ಹೋರಾಟಗಾರ ಸಾಕೇತ್ ಗೋಖಲೆ ಎಂಬುವವರು ಅರ್ಜಿ ಸಲ್ಲಿಸಿದ್ದರು.
“ಸಂದರ್ಶನವನ್ನು ಸಂಪೂರ್ಣವಾಗಿ ನಾನು ವೀಕ್ಷಿಸಿದ್ದೇನೆ. ನ್ಯಾಯಾಲಯವನ್ನು ನಿಂದಿಸುವ ಯಾವುದೇ ಹೇಳಿಕೆ ಕಂಡುಬಂದಿಲ್ಲ” ಎಂದು ವೇಣುಗೋಪಾಲ್ ಪ್ರತಿಪಾದಿಸಿದ್ದಾರೆ. ನ್ಯಾಯಾಲಯಗಳ ಖಂಡನೆ ಕಾಯ್ದೆ ಮತ್ತು ನಿಯಮಗಳ ಅಡಿಯಲ್ಲಿ, ಖಾಸಗಿ ವ್ಯಕ್ತಿಯಿಂದ ಕ್ರಿಮಿನಲ್ ತಿರಸ್ಕಾರ ಪ್ರಕರಣವನ್ನು ದಾಖಲಿಸಲು ಅಟಾರ್ನಿ ಜನರಲ್ ಅಥವಾ ಸಾಲಿಸಿಟರ್ ಜನರಲ್ ಅವರ ಒಪ್ಪಿಗೆ ಅಗತ್ಯವಿದೆ. ಆದರೆ ನ್ಯಾ. ಗೊಗೊಯಿ ಪ್ರಕರಣದಲ್ಲಿ ಅಟಾರ್ನಿ ಜನರಲ್ ಅನುಮತಿ ನೀಡಲು ನಿರಾಕರಿಸಿದ್ದಾರೆ.