ಬೆಂಗಳೂರು: ಲೈಂಗಿಕ ಕಿರುಕುಳದ ವಿರುದ್ಧ ಪ್ರತಿಭಟಿಸುತ್ತಿರುವ ಕುಸ್ತಿಪಟುಗಳಿಗೆ ಬೆಂಬಲವಾಗಿ ನಾವು ನಿಲ್ಲುತ್ತೇವೆ ಎಂದು WIM ಕರ್ನಾಟಕ ರಾಜ್ಯಾಧ್ಯಕ್ಷೆ ಪಾತಿಮಾ ನಸೀಮಾ ಹೇಳಿದ್ದಾರೆ. ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (WFI) ಮುಖ್ಯಸ್ಥರಿಂದಾಗಿದೆ ಎನ್ನಲಾದ ಲೈಂಗಿಕ ಕಿರುಕುಳದ ವಿರುದ್ಧ ನಿರಂತರ ಪ್ರತಿಭಟನೆಯಲ್ಲಿ ತೊಡಗಿರುವ, ದೇಶಕ್ಕೆ ಪದಕಗಳನ್ನು ತಂದುಕೊಟ್ಟ ಕುಸ್ತಿಪಟುಗಳೊಂದಿಗೆ ವಿಮೆನ್ ಇಂಡಿಯಾ ಮೂಮೆಂಟ್ (WIM) ದೃಢವಾಗಿ ನಿಲ್ಲುತ್ತದೆ ಎಂದು ಹೇಳಿದ್ದಾರೆ.
ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪದಕಗಳನ್ನು ಗೆದ್ದಿರುವ ಕುಸ್ತಿಪಟುಗಳಿಗೆ WFI ಮುಖ್ಯಸ್ಥರು ವರ್ಷಗಳಿಂದ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. WFI ಮುಖ್ಯಸ್ಥರ ವಿರುದ್ಧದ ಲೈಂಗಿಕ ಕಿರುಕುಳದ ಆರೋಪಗಳು ಬಹಳ ಗಂಭೀರ ಹಾಗೂ ಆತಂಕಕಾರಿಯಾಗಿವೆ” ಎಂದು ವಿಮೆನ್ ಇಂಡಿಯಾ ಮೂವ್ಮೇಂಟ್ (WIM) ಕರ್ನಾಟಕ ರಾಜ್ಯಾಧ್ಯಕ್ಷೆ ಪಾತಿಮಾ ನಸೀಮಾ ಹೇಳಿದ್ದಾರೆ. “ಈ ಕುಸ್ತಿಪಟುಗಳು ಕುಸ್ತಿಯಲ್ಲಿನ ತಮ್ಮ ಸಾಧನೆಗಳಿಂದ ಭಾರತಕ್ಕೆ ದೊಡ್ಡ ಗೌರವವನ್ನು ತಂದಿದ್ದಾರೆ. ಅದಕ್ಕೆ ಪ್ರತಿಯಾಗಿ ಆವರು ಗೌರವಕ್ಕೆ ಅರ್ಹರೇ ಹೊರತು ಕಿರುಕುಳಕ್ಕಲ್ಲ. WFI ಮುಖ್ಯಸ್ಥರ ವಿರುದ್ಧ ಕ್ರಮ ಕಠಿಣ ಕ್ರಮ ಕೈಗೊಳ್ಳುವಂತೆ ಹಾಗೂ ಆದರ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ಅವರನ್ನು ತಕ್ಷಣ ಬಂಧಿಸುವಂತೆ ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದರು.
ಭಾರತದ ಹೆಣ್ಣುಮಕ್ಕಳಿಗೆ ಆಗುತ್ತಿರುವ ಅನ್ಯಾಯವನ್ನು ಆಲಿಸಲು ವಿಫಲವಾಗಿರುವ ಸೊಕ್ಕಿನ ಮತ್ತು ಹಠಮಾರಿ ಫ್ಯಾಸಿಸ್ಟ್ ಸರ್ಕಾರದ ವಿರುದ್ಧ ಪ್ರತಿಭಟಿಸಲು ತಮ್ಮ ಮೂಲಭೂತ ಹಕ್ಕನ್ನು ಚಲಾಯಿಸಿರುವ ಕುಸ್ತಿಪಟುಗಳ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲಿಸಿ ಬಂಧಿಸುವುದನ್ನು ವಿಮೆನ್ ಇಂಡಿಯಾ ಮೂಮೆಂಟ್ (WIM) ಬಲವಾಗಿ ಖಂಡಿಸುತ್ತದೆ. ಸರ್ಕಾರದ ಈ ಕ್ರಮ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ಪಷ್ಟ ಉಲ್ಲಂಘನೆಯಾಗಿದೆ ಮತ್ತು ಭಿನ್ನಾಭಿಪ್ರಾಯವನ್ನು ದಮನಗೊಳಿಸಲು ಮತ್ತು ನ್ಯಾಯಕ್ಕಾಗಿ ಹೋರಾಡುವವರ ಧ್ವನಿಯನ್ನು ಹತ್ತಿಕ್ಕುವ ಉದ್ದೇಶವನ್ನು ಹೊಂದಿದೆ ಎಂದರು.
ಭಾನುವಾರ, ಮೇ 28, 2023 ರಂದು, ಪ್ರಜಾಪ್ರಭುತ್ವದ ಸಂಕೇತವಾದ ಹೊಸ ಸಂಸತ್ತಿನ ಕಟ್ಟಡವನ್ನು ಭಾರತದ ಪ್ರಧಾನಿ ಉದ್ಘಾಟಿಸಿದ್ದನ್ನು ಜಗತ್ತು ವೀಕ್ಷಿಸಿತು. ಅದೇ ಸಮಯದಲ್ಲಿ, ಪ್ರತಿಭಟಿಸುವ ತಮ್ಮ ಸಾಂವಿಧಾನಿಕ ಹಕ್ಕನ್ನು ಚಲಾಯಿಸಿದ್ದಕ್ಕಾಗಿ ಭಾರತೀಯ ಕುಸ್ತಿಪಟುಗಳನ್ನು ಅಮಾನುಷವಾಗಿ ಎಳೆದುಕೊಂಡು ಹೋಗಿ ಸೆರೆಮನೆಗೆ ಹಾಕಲಾಯಿತು. ತನ್ನ ಪಕ್ಷದ ಸಂಸದರನ್ನು ರಕ್ಷಿಸಲು ಭಾರತಕ್ಕೆ ಹೆಮ್ಮೆ ತಂದವರ ವಿರುದ್ಧವೂ ಕೂಡ ಬಿಜೆಪಿ ಎಂತ ಕಠಿಣ ಕ್ರಮಕ್ಕೂ ಮುಂದಾಗುತ್ತದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ ಎಂದರು.
ಬಿಜೆಪಿಯ ಈ ನಡೆ ಇಡೀ ದೇಶಕ್ಕೆ ಅವಮಾನ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವುದಕ್ಕಿಂತ ತಮ್ಮ ಸ್ವಂತ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳುವುದೇ ಮುಖ್ಯ ಎಂದು ಅವರು ತೋರಿಸಿದ್ದಾರೆ. ಇದೆಲ್ಲವನ್ನು ಜಗತ್ತು ನೋಡುತ್ತಿದೆ.
ಈ ವಿಚಾರವಾಗಿ ವಿಶ್ವ ಕುಸ್ತಿಪಟುಗಳ ಫೆಡರೇಷನ್ ನೀಡಿರುವ ಎಚ್ಚರಿಕೆಯು WFI ಗೆ ಮತ್ತೊಂದು ಹೊಡೆತವಾಗಿದೆ. WFI ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಅಂತರಾಷ್ಟ್ರೀಯ ಸ್ಪರ್ಧೆಗಳಿಂದ ಭಾರತ ನಿಷೇಧಕ್ಕೊಳಗಾಗುವ ಅಪಾಯ ಎದುರಿಸುತ್ತಿದೆ. ಹಾಗಾದಲ್ಲಿ ಭಾರತ ಅಂತಾರಾಷ್ಟ್ರೀಯ ಕುಸ್ತಿ ಸ್ಪರ್ಧೆಗಳಲ್ಲಿ ತನ್ನ ಪ್ರಾತಿನಿಧ್ಯವನ್ನು ಕಳೆದುಕೊಳ್ಳಲಿದೆ ಎಂದು ಹೇಳಿದ್ದಾರೆ.
WFI ಮುಖ್ಯಸ್ಥರನ್ನು ತಕ್ಷಣ ಬಂಧಿಸಬೇಕು ಮತ್ತು ಕುಸ್ತಿ ಕ್ರೀಡೆಯನ್ನು ಲೈಂಗಿಕ ಕಿರುಕುಳದಿಂದ ಮುಕ್ತವಾಗಿಸಬೇಕು ಎಂದು ನಾವು ಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ ಎಂದರು.