►ಮೋನು ಮನೇಸರ್ ಬಂಧನಕ್ಕೆ ರಾಜಸ್ತಾನ ಪೊಲೀಸರು ಬಂದರೆ ಅವರನ್ನು ಜೀವಂತ ವಾಪಸು ಹೋಗಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದ ಹಿಂದೂ ಮಹಾ ಪಂಚಾಯತ್
►ಮೋನು ಮನೇಸರ್ ಮತ್ತು ಆತನ ಕುಟುಂಬವನ್ನು ಪೊಲೀಸರಿಂದ ರಕ್ಷಿಸಲು 16 ಮಂದಿಯ ತಂಡ ರಚನೆ
ಚಂಡೀಗಡ: ಕಾರಿನಲ್ಲಿ ಜುನೈದ್, ನಾಸಿರ್ ಎಂಬವರನ್ನು ಸುಟ್ಟು ಕೊಂದ ಪ್ರಕರಣದ ಎಫ್’ಐಆರ್’ನಿಂದ ಬಜರಂಗ ದಳ ನಾಯಕ, ಗೋರಕ್ಷಕ ದಳದ ಮುಖಂಡ ಮೋಹಿತ್ ಯಾದವ್ ಅಲಿಯಾಸ್ ಮೋನು ಮನೇಸರ್ ಹೆಸರನ್ನು ರಾಜಸ್ತಾನ ಪೊಲೀಸರು ತೆಗೆದು ಹಾಕಿದ್ದಾರೆ ಎಂದು ವರದಿಯಾಗಿದೆ.
ಹರಿಯಾಣದಲ್ಲಿ ಹಿಂದುತ್ವ ಸಂಘಟನೆಗಳು ಮೋನು ಮನೇಸರ್ ಬೆಂಬಲಿಸಿ ಎರಡು ಹಿಂದೂ ಮಹಾ ಪಂಚಾಯತ್ ನಡೆಸಿ ರಾಜಸ್ತಾನ ಪೊಲೀಸರಿಗೆ ಬೆದರಿಕೆ ಹಾಕಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ.
ಈ ಬರ್ಬರ ಕೊಲೆಯ ಹಿಂದೆ ಗೋರಕ್ಷಕ ದಳದ ಒಂಬತ್ತು ಮಂದಿ ಇದ್ದಾರೆ ಎಂದು ರಾಜಸ್ತಾನ ಪೊಲೀಸ್ ತನಿಖಾ ದಳದವರು ಹೇಳಿದ್ದಾರೆ.
“ರಿಂಕು ಸೈನಿ, ಅನಿಲ್ ಮತ್ತು ಶ್ರೀಕಾಂತ್ ಇರುವ ಒಂದು ಗುಂಪು ಮೇವತ್ ಸುತ್ತಮುತ್ತ ಕಾರ್ಯವೆಸಗುತ್ತದೆ. ಫೆಬ್ರವರಿ 15ರಂದು ಈ ಗುಂಪು ತಾಂಡೆಮ್’ನಲ್ಲಿ ಇನ್ನೊಂದು ಗುಂಪಿನೊಡನೆ ಕೆಲಸ ಮಾಡುತ್ತಿತ್ತು. ಅದರಲ್ಲಿನ ಆಪಾದಿತರು ಮೋನು ರಾಣಾ, ಕಾಳು, ವಿಕಾಸ್, ಶಶಿಕಾಂತ್, ಕಿಶೋರ್ ಮತ್ತು ಗೋಗಿ. ಎರಡನೆಯ ಗುಂಪು ಹರಿಯಾಣದ ಜಿಂದ್ ಭಿವಾನಿ ಕರ್ನಾಲ್ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿತ್ತು” ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾಗಿ ವರದಿಯಾಗಿದೆ.
ಬುಧವಾರ ಪೊಲೀಸರು ಈ ಪ್ರಕರಣದ ಆರೋಪಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಈಗಾಗಲೇ ಬಂಧಿತನಾಗಿರುವ ಸೈನಿಯ ಹೊರತಾಗಿ ಉಳಿದ ಎಂಟು ಹೆಸರುಗಳು ಅದರಲ್ಲಿ ಇವೆ.
ಮೋನು ಮನೇಸರ್ ಆರೋಪಿ ಎಂದು ಹೇಳಲಾಗಿತ್ತು. ಆದರೆ ಈಗಲೂ ಆತನು ಈ ಮೊಕದ್ದಮೆಯಲ್ಲಿ ಸಂಶಯಿತ ಮಾತ್ರ ಎಂದು ಪೊಲೀಸರು ಹೇಳಿದ್ದಾರೆ.
ಮಂಗಳವಾರ ಮತ್ತು ಬುಧವಾರ ಹರಿಯಾಣದ ಮನೇಸರ್ ಜಿಲ್ಲೆಯ ಎರಡು ಕಡೆ ನೂರಾರು ಜನ ಸಂಘಪರಿವಾರದ ಕಾರ್ಯಕರ್ತರು, ಮೋನು ಮನೇಸರ್ ಬೆಂಬಲಿಸಿ ಹಿಂದೂ ಪಂಚಾಯತ್ ನಡೆಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ಕಾರಿನಲ್ಲಿ ಇಬ್ಬರು ಮುಸ್ಲಿಮರನ್ನು ಅಮಾನವೀಯವಾಗಿ ಸುಟ್ಟು ಕೊಂದ ಆರೋಪಿಗಳಲ್ಲಿ ಮೋನು ಮನೇಸರ್ ಒಬ್ಬ ಎಂದು ಹೇಳಲಾಗಿತ್ತು.
“ಮೋನು ಮನೇಸರ್ ಊರಿಗೆ ರಾಜಸ್ತಾನ ಪೊಲೀಸರು ಪ್ರವೇಶಿಸಿದರೆ ನಾವು ಅವರನ್ನು ಜೀವಂತ ವಾಪಸು ಹೋಗಲು ಬಿಡುವುದಿಲ್ಲ. ನಾವು ಈಗಾಗಲೇ ರಾಜಸ್ತಾನ ಪೊಲೀಸರಿಗೆ ಅವಕಾಶ ನೀಡದಂತೆ ಪಟೌಡಿ ಮತ್ತು ಮನೇಸರ್ ಪೊಲೀಸರಿಗೆ ತಾಕೀತು ಮಾಡಿದ್ದೇವೆ” ಎಂದು ಹಿಂದೂ ಮಹಾ ಪಂಚಾಯತ್ ಬಹಿರಂಗವಾಗಿ ಪೊಲೀಸರಿಗೆ ಬೆದರಿಕೆ ಹಾಕಿತ್ತು.
ಇದರ ನಡುವೆ ಮೋನು ಮನೇಸರ್ ಮತ್ತು ಆತನ ಕುಟುಂಬವನ್ನು ರಕ್ಷಿಸಲು ಹಿಂದೂ ಮಹಾ ಪಂಚಾಯತ್’ನವರು ಗೋರಕ್ಷಕರೂ ಇರುವ 16 ಜನರ ತಂಡವೊಂಡನ್ನು ರಚಿಸಿದ್ದಾರೆ.