ಜೂ.4ರ ಷೇರುಪೇಟೆ ಕುಸಿತ ಮಹಾ ಹಗರಣ: ರಾಹುಲ್ ಗಾಂಧಿ

Prasthutha|

ನವದೆಹಲಿ: ಜೂನ್ 4 ರಂದು ಷೇರು ಮಾರುಕಟ್ಟೆ ಏಕಾಏಕಿ ಪತನಗೊಂಡು ಹೂಡಿಕೆದಾರರಿಗೆ 30 ಲಕ್ಷ ಕೋಟಿ ರೂಪಾಯಿ ನಷ್ಟವಾಗಿರುವುದು ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿಯ ಉನ್ನತ ನಾಯಕರು ಸೇರಿಕೊಂಡು ಮಾಡಿರುವ ಹಗರಣ ಎಂದು ಕಾಂಗ್ರೆಸ್​​ ಮುಖಂಡ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

- Advertisement -

ಎಐಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಬಿಜೆಪಿಯ ಉನ್ನತ ನಾಯಕರು ಚುನಾವಣಾ ಫಲಿತಾಂಶ ಪ್ರಕಟಣೆಗೆ ಕೆಲವೇ ದಿನಗಳ ಮೊದಲು ಷೇರು ಮಾರುಕಟ್ಟೆಯ ಬಗ್ಗೆ ಹೇಳಿಕೆ ನೀಡಿದ್ದರು. ನರೇಂದ್ರ ಮೋದಿ ಅದಾನಿ ನೇತೃತ್ವದ ಎರಡು ಚಾನಲ್ ಗಳಿಗೆ ಸಂದರ್ಶನ ನೀಡಿ, ಹೂಡಿಕೆ ಮಾಡಿದರೆ ಮಾರ್ಕೆಟ್ ಮೇಲೆ ಏಳುತ್ತದೆ ಎಂದು ನಂಬಿಸಿದ್ದರು. ಲೋಕ ಸಭಾ ಚುನಾವಣೆಯ ಸಮಯದಲ್ಲಿ ಪ್ರಧಾನಿ, ಕೇಂದ್ರ ಗೃಹ ಸಚಿವರು ಮತ್ತು ಹಣಕಾಸು ಸಚಿವರು ಷೇರು ಮಾರುಕಟ್ಟೆಯ ಬಗ್ಗೆ ಹೇಳಿಕೆ ನೀಡಿದ್ದು ಭಾರತೀಯ ಚುನಾವಣಾ ಇತಿಹಾಸದಲ್ಲಿಯೇ ಇದು ಮೊದಲ ಬಾರಿಗೆ ಆಗಿದೆ. ನಾವು ಈ ಬಗ್ಗೆ ತನಿಖೆ ನಡೆಸಲು ಜಂಟಿ ಸಮಿತಿಯನ್ನು ಒತ್ತಾಯಿಸುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಯಾವ ಆಧಾರದ ಮೇಲೆ ಎಕ್ಸಿಟ್ ಪೋಲ್ ಮಾಡಲಾಗಿದೆ ಎಂದು ಪ್ರಶ್ನಿಸಿದ ಅವರು, ಇದಕ್ಕೂ ಷೇರು ಮಾರುಕಟ್ಟೆ ಹಗರಣಕ್ಕೂ ಸಂಬಂಧವಿದೆ. ಈ ಹಗರಣ ಆದಾನಿಗೂ ಮೀರಿದ ಬಹುದೊಡ್ಡ ಹಗರಣವಾಗಿದೆ. ಈ ಬಗ್ಗೆ ಜಂಟಿ ಸಂಸದೀಯ ಸಮಿತಿ(ಜೆಪಿಸಿ) ತನಿಖೆಗೆ ಒತ್ತಾಯಿಸಿದ್ದಾರೆ.

- Advertisement -

ಮೇ 23 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಷೇರು ಮಾರುಕಟ್ಟೆ ಹೊಸ ಎತ್ತರವನ್ನು ತಲುಪಲಿದೆ ಎಂದು ಹೇಳಿದ್ದರು. ಜೂನ್ 4 ರಂದು, ಬಿಜೆಪಿ ದಾಖಲೆಯ ಮತಗಳೊಂದಿಗೆ ಗೆಲ್ಲುವಾಗ ಷೇರು ಮಾರುಕಟ್ಟೆಯೂ ಹೊಸ ದಾಖಲೆಯ ಗರಿಷ್ಠ ಮಟ್ಟ ತಲುಪುತ್ತದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ ಎಂದು ಎನ್​ಡಿಟಿವಿ ಸಂದರ್ಶನದಲ್ಲಿ ಹೇಳಿದ್ದರು.

ಮೇ 13 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾತನಾಡಿ, ನನ್ನ ಅಭಿಪ್ರಾಯದಲ್ಲಿ, ಜೂನ್ 4 ರೊಳಗೆ ಷೇರು ಖರೀದಿಸಿ. ಮಾರುಕಟ್ಟೆಯಲ್ಲಿ ಷೇರು ಮೌಲ್ಯ ಹೆಚ್ಚಾಗಲಿದೆ” ಎಂದು ಎನ್​ಡಿಟಿವಿ ಸಂದರ್ಶನದಲ್ಲೇ ಹೇಳಿದ್ದರು. ಈ ಮಾಧ್ಯಮ ವ್ಯವಹಾರ ಸಂಸ್ಥೆಯೊಂದರ ಒಡೆತನಕ್ಕೆ ಸೇರಿದೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಸಬೇಕು ಎಂದು ರಾಹುಲ್ ಹೇಳಿದ್ದಾರೆ

ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಐದು ಕೋಟಿ ಕುಟುಂಬಗಳಿಗೆ ನಿರ್ದಿಷ್ಟ ಹೂಡಿಕೆ ಸಲಹೆಯನ್ನು ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರು ಏಕೆ ನೀಡಿದರು? ಹೂಡಿಕೆ ಸಲಹೆ ನೀಡುವುದು ಅವರ ಕೆಲಸವೇ? ಒಂದೇ ಮಾಧ್ಯಮಕ್ಕೆ ಎರಡು ಸಂದರ್ಶನಗಳನ್ನು ಏಕೆ ನೀಡಲಾಗಿದೆ? ಷೇರು ಖರೀದಿ ಮಾಡಲು ಹೇಳಿಕೆ ನೀಡುವ ಮೊದಲು ಚುನಾವಣೋತ್ತರ ಸಮೀಕ್ಷೆಗಳನ್ನು ಬಿತ್ತರಿಸಲಾಯಿತು. ನೈಜ ಅಂಕಿ- ಅಂಶ ಮೋದಿ ಸೇರಿದಂತೆ ಬಿಜೆಪಿಯ ಬಳಿ ಇತ್ತು. ಅವರಿಗೆ ಏನಾಗುತ್ತದೆ ಎಂದು ಗೊತ್ತಿತ್ತು. ಆದರೂ 5 ಲಕ್ಷ ಹೂಡಿಕೆದಾರರಿಗೆ ವಂಚನೆ ಮಾಡಲಾಗಿದೆ ಎಂದು ರಾಹುಲ್ ಕಿಡಿಗಾರಿದ್ದಾರೆ.

ಇದೊಂದು ಹಗರಣ ಎಂಬುದು ನಮಗೆ ಮನವರಿಕೆಯಾಗಿದೆ. ಯಾರೋ ಭಾರತೀಯ ಚಿಲ್ಲರೆ ಹೂಡಿಕೆದಾರರ ವೆಚ್ಚದಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಮಾಡಿದ್ದಾರೆ. ಮತ್ತು ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರು ಖರೀದಿಸುವ ಸೂಚನೆಯನ್ನು ನೀಡಿದ್ದಾರೆ. ಹಾಗಾಗಿ ಜಂಟಿ ಸಂಸದೀಯ ಸಮಿತಿಯ ಮೂಲಕ ತನಿಖೆ ನಡೆಸುವಂತೆ ನಾವು ಒತ್ತಾಯಿಸುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.



Join Whatsapp