ಮುಂಬೈ: ಮುಂಬೈ ಮೂಲದ ಪತ್ರಕರ್ತೆ ರಾಣಾ ಅಯ್ಯೂಬ್ ಅವರನ್ನು ವಿದೇಶಕ್ಕೆ ತೆರಳದಂತೆ ನಿರ್ಬಂಧಿಸಲಾಗಿದೆ. ಲಂಡನ್ ಗೆ ತೆರಳಲು ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ವೇಳೆ ರಾಣಾ ಅವರನ್ನು ಮಂಗಳವಾರ ಅಧಿಕಾರಿಗಳು ತಡೆದಿದ್ದಾರೆ. ಕೋವಿಡ್-19 ಪರಿಹಾರ ನಿಧಿಗಾಗಿ ಸಂಗ್ರಹಿಸಲಾದ ಮೊತ್ತವನ್ನು ಬೇರೆ ಉದ್ದೇಶಗಳಿಗಾಗಿ ಬಳಸಿದ್ದಾರೆ ಎನ್ನುವ ಆರೋಪದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ರಾಣಾ ಅವರಿಗೆ ನೋಟಿಸ್ ನೀಡಿದ್ದರು. ಏಪ್ರಿಲ್ 1 ರಂದು ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿತ್ತು.
ಈ ಕುರಿತು ಪ್ತಕ್ರಿಯಿಸಿರುವ ರಾಣಾ ಅಯ್ಯೂಬ್, ʼ3 ಗಂಟೆಗೆ ನಿಗದಿಯಾಗಿದ್ದ ವಿಮಾನದಲ್ಲಿ ಲಂಡನ್ ಗೆ ಪ್ರಯಾಣಿಸಲು ವಿಮಾನ ನಿಲ್ದಾಣಕ್ಕೆ ಬಂದಿದ್ದೆ. ಆದರೆ ಇಡಿ ಅಧಿಕಾರಿಗಳು ಮಧ್ಯಾಹ್ನ 1,46ಕ್ಕೆ ಸಮನ್ಸ್ ನೀಡಿದ್ದಾರೆ. 90 ನಿಮಿಷಗಳ ಕಾಲ ಎಮಿಗ್ರೇಷನ್ ಅಧಿಕಾರಿಗಳು ನನ್ನನ್ನು ತಡೆದು ನಿಲ್ಲಿಸಿದ್ದರುʼ ಎಂದಿದ್ದಾರೆ.
ಇಡಿ ಲುಕೌಟ್ ನೋಟಿಸ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ರಾಣಾ ಅವರನ್ನು ತಡೆದಿದ್ದೇವೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಫೆಬ್ರವರಿ ಮೂರರಂದು ರಾಣಾಗೆ ಸಮನ್ಸ್ ನೀಡಲಾಗಿತ್ತು ಎಂಬ ಅಧಿಕಾರಿಗಳ ವಾದವನ್ನು ನಿರಾಕರಿಸುವ ರಾಣಾ ಅಯ್ಯೂಬ್, ಮಾರ್ಚ್ 29ರಂದು ಈಮೇಲ್ʼನಲ್ಲಿ ಸಮನ್ಸ್ ಬಂದಿದೆ ಎಂದಿದ್ದಾರೆ.
ಪ್ರತಿಷ್ಠಿತ ʼವಾಷಿಂಗ್ಟನ್ ಪೋಸ್ಟ್ʼ ಪತ್ರಿಕೆಯಲ್ಲಿ ಅಂಕಣಗಾರ್ತಿಯಾಗಿರುವ ರಾಣಾ ಅಯ್ಯೂಬ್, ʼಸಾಮಾಜಿಕ ಮಾಧ್ಯಮಗಳಲ್ಲಿ ಮಹಿಳಾ ಪತ್ರಕರ್ತರ ಮೇಲಿನ ದೌರ್ಜನ್ಯʼ ಎಂಬ ವಿಷಯದ ಕುರಿತು ಲಂಡನ್ ನಲ್ಲಿ ಆಯೋಜಿಸಲಾಗಿದ್ದ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಬೇಕಿತ್ತು. ಆದರೆ ಮುಂಬೈನಿಂದ ಲಂಡನ್ ಗೆ ತೆರಳಬೇಕಿದ್ದ ವಿಮಾನದಲ್ಲಿ ರಾಣಾ ಪ್ರಯಾಣಿಸುವುದನ್ನು ಮಂಗಳವಾರ ಮಧ್ಯಾಹ್ನ ತಡೆಯಲಾಗಿದೆ.
ಪ್ರಣೋಯ್ ರಾಯ್ ದಂಪತಿಯನ್ನು ತಡೆದಿದ್ದ ಅಧಿಕಾರಿಗಳು
ವಿಮಾನ ನಿಲ್ದಾಣಗಳಲ್ಲಿ ಪತ್ರಕರ್ತರನ್ನು ತಡೆಯುತ್ತಿರುವುದು ಇದು ಮೊದಲೇನಲ್ಲ. ಸಿಬಿಐ ತನಿಖೆ ನಡೆಸುತ್ತಿದ್ದ ಎರಡು ವರ್ಷಗಳ ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ NDTV ಮುಖ್ಯ ಸಂಪಾದಕರಾಗಿರುವ ಪ್ರಣೋಯ್ ರಾಯ್ ಮತ್ತು ಅವರ ಪತ್ನಿಯನ್ನು 2019ರಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ತಡೆದಿದ್ದರು.