ನವದೆಹಲಿ: ಜೆಎನ್ ಯು ಮಾಜಿ ವಿದ್ಯಾರ್ಥಿನಿ, ಸಾಮಾಜಿಕ ಕಾರ್ಯಕರ್ತೆ ಆಫ್ರೀನ್ ಫಾತಿಮಾರ ಮನೆಯನ್ನು ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಧ್ವಂಸಗೊಳಿಸಿದ್ದನ್ನು ವಿರೋಧಿಸಿ ಜೆಎನ್ ಯುಎಸ್ ಯು- ಜವಾಹರಲಾಲ್ ನೆಹರು ವಿದ್ಯಾರ್ಥಿಗಳ ಸಂಘದ ಸದಸ್ಯರು ಕ್ಯಾಂಪಸ್ ನಲ್ಲಿ ಪ್ರತಿಭಟನೆ ನಡೆಸಿದರು.
ಪಿಡಿಎ- ಪ್ರಯಾಗ್ ರಾಜ್ ಅಭಿವೃದ್ಧಿ ಪ್ರಾಧಿಕಾರದವರು ಭಾನುವಾರ ಭಾರೀ ಪೊಲೀಸ್ ಪಡೆಯೊಂದಿಗೆ ಆಗಮಿಸಿ ಜಾವೇದ್ ಅಹ್ಮದ್ ಅವರ ಮನೆಯನ್ನು ಬುಲ್ಡೋಜಿಂಗ್ ಮಾಡಿದ್ದಾರೆ. ಜಾವೇದ್ ಅಹ್ಮದ್ ರ ಮಗಳು ಆಫ್ರೀನ್ ಫಾತಿಮಾ.
ಜೂನ್ 10ರಂದು ನಡೆದ ಪ್ರತಿಭಟನೆಯಲ್ಲಿ ಕಲ್ಲು ತೂರಾಟ ನಡೆದಿದ್ದು, ಅದರ ಮುಖ್ಯ ಸೂತ್ರಧಾರಿಗಳು ಎಂದು ಆರೋಪಿಸಿ ಈ ಮನೆಗಳನ್ನು ಧ್ವಂಸ ಮಾಡಲಾಗಿದೆ.
ಜೆಎನ್ ಯುಎಸ್ ಯುನವರು ಪ್ರತಿಭಟನೆ ವೇಳೆ ಉತ್ತರ ಪ್ರದೇಶದ ಆದಿತ್ಯನಾಥ ಸರಕಾರವನ್ನು ಬುಲ್ಡೋಜರ್ ರಾಜ್ ಎಂದು ಘೋಷಣೆ ಕೂಗಿದ್ದರು. ಅಲ್ಲದೆ ಮುಸ್ಲಿಮರ ಬೇಟೆಯನ್ನು ನಿಲ್ಲಿಸಿ ಮೊದಲಾದ ಫಲಕಗಳನ್ನು ಪ್ರದರ್ಶಿಸಿದ್ದರು.
ಬಿಜೆಪಿಯ ಅಮಾನತುಗೊಂಡಿರುವ ವಕ್ತಾರೆ ನೂಪುರ್ ಶರ್ಮಾರ ಪ್ರವಾದಿವರ್ಯರ ಬಗೆಗಿನ ವಿವಾದಾತ್ಮಕ ಹೇಳಿಕೆ ವಿರುದ್ಧ ಜೂನ್ 10ರಂದು ಪ್ರಯಾಗ್ ರಾಜ್ ಮೊದಲಾದೆಡೆ ನಡೆದ ಪ್ರತಿಭಟನೆಯ ಮೇಲೆ ಕಲ್ಲು ತೂರಾಟ ನಡೆದ ಬಳಿಕ ಹಿಂಸಾರೂಪ ಪಡೆದಿತ್ತು.
ಪ್ರಯಾಗ್ ರಾಜ್ ನಲ್ಲಿ ಒಂದು ಗುಂಪು ಕೆಲವು ಗಾಡಿಗಳು ಮತ್ತು ಬೈಕ್ ಗಳನ್ನು ಸುಟ್ಟಿದ್ದಲ್ಲದೆ ಪೋಲೀಸ್ ವಾಹನವೊಂದಕ್ಕೆ ಬೆಂಕಿ ಹಚ್ಚಲು ಪ್ರಯತ್ನಿಸಿತು. ಪ್ರತಿಭಟನಾಕಾರರನ್ನು ಚದುರಿಸಲು ಪೋಲೀಸರು ಅಶ್ರುವಾಯು ಮತ್ತು ಲಾಠಿ ಚಾರ್ಜ್ ನಡೆಸಿದರು. ಈ ಗಲಭೆಯಲ್ಲಿ ಒಬ್ಬ ಪೋಲೀಸ್ ಗಾಯಗೊಂಡಿದ್ದರು
ಈ ಗಲಭೆ ಸಂಬಂಧ ಜಾವೇದ್ ಅಹ್ಮದ್ ರನ್ನು ಬಂಧಿಸಲಾಗಿದ್ದು, ಅವರ ವಿಚಾರಣೆ ನಡೆದಿದೆ ಎಂದು ಪೋಲೀಸರು ತಿಳಿಸಿದ್ದಾರೆ.