ಜಮ್ಮು ಮತ್ತು ಕಾಶ್ಮೀರದಲ್ಲಿ ದಲಿತ ಪತ್ನಿಗೆ ವಿಚ್ಛೇದನ ನೀಡದ ಬ್ರಾಹ್ಮಣ ಪತಿಗೆ ಕುಟುಂಬದಿಂದ ವಿಷಪ್ರಾಶನ, ಬೆಂಕಿ ಹಚ್ಚಿ ಕೊಲೆಯತ್ನ !

Prasthutha|

ಉಧಂಪುರ: ದಲಿತ ಹುಡುಗಿಯನ್ನು ಮದುವೆಯಾಗಿದ್ದ ಬ್ರಾಹ್ಮಣ ಯವಕನೋರ್ವನಿಗೆ ವಿಷವುಣಿಸಿ ನಂತರ ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿದ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ. ಹುಡುಗನ ಕುಟುಂಬದವರೇ ಈ ಕೃತ್ಯ ನಡೆಸಿರುವುದಾಗಿ ವರದಿಯಾಗಿದೆ.

- Advertisement -

ಅಶ್ವನಿ ಶರ್ಮಾ ಎಂಬ ಬ್ರಾಹಣ ಹುಡುಗ ಲಕ್ಷ್ಮಿ ದೇವಿ ಎಂಬ ದಲಿತ ಹುಡುಗಿಯನ್ನು ಮದುವೆಯಾಗಿದ್ದರು. ಪತ್ನಿ ಲಕ್ಷ್ಮಿ ದೇವಿಗೆ ವಿಚ್ಛೇದನ ನೀಡುವಂತೆ ಪತಿಯ ತಂದೆ, ಚಿಕ್ಕಮ್ಮ ಸೇರಿಕೊಂಡು ಒತ್ತಾಯಿಸುತ್ತಿದ್ದರು. ಇದನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಶರ್ಮಾ ದಂಪತಿಗಳಿಗೆ ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದಾರೆ. ಮಾತ್ರವಲ್ಲ ಈ ಹಿಂದೆ ಆಹಾರದಲ್ಲಿ ವಿಷವನ್ನು ಕೂಡಾ ಬೆರೆಸಿ ನೀಡಲಾಗಿತ್ತು ಎಂದು ದಂಪತಿಗಳು ದೂರಿದ್ದಾರೆ.

ಬ್ರಾಹ್ಮಣ ಜಾತಿಗೆ ಸೇರಿದ ಅಶ್ವನಿ ಶರ್ಮಾ ಮತ್ತು ದಲಿತೆಯಾದ ಲಕ್ಷ್ಮಿ ದೇವಿ 2009 ರಲ್ಲಿ ಮನೆಯವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದರು. ಪ್ರಸಕ್ತ ಈ ದಂಪತಿಗಳು ಕಾಶ್ಮೀರದ ಉಧಂಪುರದ ಸಿಯಾಲ್ ಸಲ್ಲನ್ ಗ್ರಾಮದಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದರು.

- Advertisement -

ಜಾತಿಯ ಎಲ್ಲೆಯನ್ನು ಮೀರಿ ವಿವಾಹವಾದ ಕಾರಣವನ್ನು ಮುಂದಿಟ್ಟುಕೊಂಡು ಅಶ್ವನಿ ಅವರ ತಂದೆ ಸತ್ ಪಾಲ್ ಶರ್ಮಾ, ಚಿಕ್ಕಮ್ಮ ರಾಮ್ ಪ್ಯಾರಿ ಸೇರಿಕೊಂಡು ದಂಪತಿಗೆ ಬೆಂಕಿ ಹಚ್ಚಿದ್ದರು. ಘಟನೆಯಲ್ಲಿ ಅಶ್ವನಿ ಅವರಿಗೆ ಸುಟ್ಟ ಗಾಯಗಳಾಗಿದೆ. ವೃತ್ತಿಯಲ್ಲಿ ಟ್ರಕ್ ಚಾಲಕರಾಗಿರುವ ಶರ್ಮಾ ಸುಟ್ಟ ಗಾಯದಿಂದಾಗಿ ಕೆಲಸವನ್ನು ಬಿಡಬೇಕಾಯಿತು ಎಂದು ಹೇಳಲಾಗುತ್ತಿದೆ. ಈ ಸಂಕಷ್ಟದ ನಡುವೆ ಲಕ್ಷ್ಮಿ ಮತ್ತು ಇಬ್ಬರು ಮಕ್ಕಳು ಅನ್ಯರ ಮನೆಯಲ್ಲಿ ಕೆಲಸ ಮಾಡುಕೊಂಡು ಜೀವನ ಸಾಗಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಈ ಮೇಲಿನ ವಿಷಪ್ರಾಶನ ಘಟನೆಗೆ ಸಂಬಂಧಿಸಿದಂತೆ ದಂಪತಿಗಳು ಪೊಲೀಸರಿಗೆ ದೂರು ನೀಡಿದ್ದರೂ ಈ ಪ್ರಕರಣವನ್ನು ಕೈಬಿಡಲಾಗಿದೆ. ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಪ್ರಕರಣ ಇನ್ನೂ ತನಿಖೆಗೆ ಬಾಕಿಯಿದೆ ಎಂದು ಸಂತ್ರಸ್ತ ಪರ ವಕೀಲರು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಹೆಚ್ಚಿನ ಪ್ರಕರಣಗಳು ವರದಿಯಾಗುವ ಮೊದಲೇ ಮುಚ್ಚಲಾಗುತ್ತದೆ ಎಂದು ದಲಿತ ಹಕ್ಕುಗಳ ಕಾರ್ಯಕರ್ತ ಮನಮೋಹನ್ ಥಪ್ಪ ಎಂಬವರು ದೂರಿದ್ದಾರೆ.

Join Whatsapp