ನವದೆಹಲಿ: ಹರಿದ್ವಾರದಲ್ಲಿ ನಡೆದ ಧರ್ಮ ಸಂಸತ್ ಕಾರ್ಯಕ್ರಮದಲ್ಲಿ ಮುಸ್ಲಿಮರ ನರಮೇಧಕ್ಕೆ ಕರೆ ನೀಡಿದ್ದ ಘಟನೆಗೆ ಸಂಬಂಧಿಸಿದಂತೆ ಗುರುವಾರ ಉತ್ತರಾಖಂಡ ಪೊಲೀಸರು ಜಿತೇಂದ್ರ ತ್ಯಾಗಿ ಅಲಿಯಾಸ್ ವಸೀಮ್ ರಿಝ್ವಿಯನ್ನು ಬಂಧಿಸಿದ್ದಾರೆ.
ಹರಿದ್ವಾರದ ಕಾರ್ಯಕ್ರಮದಲ್ಲಿ ಮುಸ್ಲಿಮ್ ನರಮೇಧಕ್ಕೆ ಕರೆ ನೀಡಿದ್ದ ಮತ್ತು ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 23 ರಂದು ಉತ್ತರಾಖಂಡ ಪೊಲೀಸರು ಜಿತೇಂದ್ರ ತ್ಯಾಗಿ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಈ ಕುರಿತು ಉತ್ತರಾಖಂಡ ಪೊಲೀಸರು ಟ್ವೀಟ್ ನಲ್ಲಿ ಪ್ರತಿಕ್ರಿಯಿಸುತ್ತಾ, “ನಿರ್ದಿಷ್ಟ ಧರ್ಮದ ವಿರುದ್ಧ ಪ್ರಚೋದನಕಾರಿ ಭಾಷಣದ ಮೂಲಕ ದ್ವೇಷವನ್ನು ಹರಡುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಜಿತೇಂದ್ರ ತ್ಯಾಗಿ ಮತ್ತು ಇತರರ ವಿರುದ್ಧ ಐಪಿಸಿ ಸೆಕ್ಷನ್ 153 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ.