ದೆಹಲಿ: ಶಾಸಕ ಜಿಗ್ನೇಶ್ ಮೇವಾನಿಯರನ್ನು ಬಂಧಿಸಿ, ಕಿರುಕುಳ ನೀಡಿರುವ ಅಸ್ಸಾಂ ಪೊಲೀಸರ ಕ್ರಮವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್ ಮೆನ್ ಓ.ಎಂ.ಎ. ಸಲಾಂ ತೀವ್ರವಾಗಿ ಖಂಡಿಸಿದ್ದಾರೆ.
ಅಸ್ಸಾಂ ಪೊಲೀಸರು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿಯವರನ್ನು ಬಂಧಿಸಿರುವುದು ರಾಜಕೀಯ ಹಗೆತನವಲ್ಲದೇ ಮತ್ತೇನೂ ಅಲ್ಲ. ಮೇವಾನಿ ಹಿಂದುಳಿದ ವರ್ಗಗಳ ನಡುವಿನ ಉದಯೋನ್ಮುಖ ನಾಯಕನಾಗಿದ್ದಾರೆ. ಜನರೊಂದಿಗೆ ವಿಶೇಷವಾಗಿ ಅಂಚಿಗೆ ತಳ್ಳಲ್ಪಟ್ಟ ವರ್ಗಗಳ ಪರವಾಗಿ ಧ್ವನಿ ಎತ್ತುತ್ತಿರುವ ಅವರ ಅಭಿಯಾನವು ಬಿಜೆಪಿ ನೆಲೆಗಳಲ್ಲೂ ಅಲೆ ಸೃಷ್ಟಿಸುತ್ತಿರುವುದರಿಂದ ಬಿಜೆಪಿ ಭೀತಿಗೊಂಡಿದೆ.
ರಾಜಕೀಯ ವಿರೋಧಿಗಳನ್ನು ಮೌನಗೊಳಿಸಲು ಈ ಅಧಿಕಾರ ದುರ್ಬಳಕೆಯ ಮೂಲಕ ಬಿಜೆಪಿ ಒಂದು ನಿದರ್ಶನವನ್ನು ರೂಪಿಸುತ್ತಿದೆ. ದೇಶದ ವಿವಿಧ ಭಾಗಗಳಲ್ಲಿ ಬಿಜೆಪಿಯನ್ನು ವಿರೋಧಿಸುವ ನಾಯಕರು ಮತ್ತು ಕಾರ್ಯಕರ್ತರು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಕಾನೂನು ಜಂಜಾಟದಲ್ಲಿ ಸಿಲುಕಿಕೊಂಡಿದ್ದಾರೆ.
ಒಂದು ಪ್ರಕರಣದಲ್ಲಿ ಜಾಮೀನು ದೊರೆತ ಕೂಡಲೇ ಮೇವಾನಿಯನರನ್ನು ಮತ್ತೊಂದು ಕಲ್ಪಿತ ಪ್ರಕರಣದಲ್ಲಿ ಬಂಧಿಸಲಾಗಿದೆ. ಇದು ಮೇವಾನಿಯವರ ಬಿಡುಗಡೆಯನ್ನು ತಡೆಯಲು ಅಸ್ಸಾಂ ಪೊಲೀಸರು ಹತಾಶ ಪ್ರಯತ್ನ ನಡೆಸುತ್ತಿದ್ದಾರೆ ಎಂಬುದನ್ನು ಸೂಚಿಸುತ್ತದೆ.
ಈ ಪ್ರಕರಣಗಳು ಅಸಂಬದ್ಧವಾದುದು ಮತ್ತು ನ್ಯಾಯಾಲಯದಲ್ಲಿ ಹಿಡಿದಿಡುವ ಹೆಚ್ಚಿನ ಸಾಧ್ಯತೆ ಇಲ್ಲ ಎಂಬ ವಿಚಾರ ಸ್ಪಷ್ಟವಾಗಿದ್ದರೂ, ಇಂತಹ ಪ್ರಕರಣಗಳ ಉದ್ದೇಶ ಅಮಾಯಕರನ್ನು ಬಂಧನದಲ್ಲಿಡುವುದು ಮತ್ತು ದೀರ್ಘ ಕಾನೂನು ಪ್ರಕ್ರಿಯೆಗಳ ಮೂಲಕ ಅವರಿಗೆ ಕಿರುಕುಳ ನೀಡುವುದಾಗಿದೆ. ಬಿಜೆಪಿ ದೇಶದಲ್ಲಿ ಪ್ರಜಾಸತ್ತಾತ್ಮಕ ಹೋರಾಟ ಮತ್ತು ಅಸಮ್ಮತಿಯನ್ನು ಅಪರಾಧವನ್ನಾಗಿ ಬಿಂಬಿಸುವ ಸನ್ನಿವೇಶ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಇದಕ್ಕೆ ಅವಕಾಶ ನೀಡಬಾರದು. ದೇಶದಲ್ಲಿರುವ ಪ್ರಜಾಸತ್ತಾತ್ಮಕ ಶಕ್ತಿಗಳು ಮೇವಾನಿ ಮತ್ತು ದೇಶದ ಆತ್ಮಸಾಕ್ಷಿಯಾಗಿರುವ ಇತರ ಬಂಧಿತರ ವಿರುದ್ಧದ ದಮನಕಾರಿ ಕ್ರಮಗಳನ್ನು ಪ್ರತಿರೋಧಿಸಲು ಮುಂದೆ ಬರಬೇಕಾಗಿದೆ.