ರಾಂಚಿ: ಜಾರ್ಖಂಡಿನ ದುಮ್ಕಾ ಜಿಲ್ಲೆಯಲ್ಲಿ 19ರ ಹರೆಯದ ತರುಣಿಯೊಬ್ಬಳನ್ನು ಯುವಕನೋರ್ವ ಮಂಗಳವಾರ ಬೆಂಕಿ ಹಚ್ಚಿದ್ದು, ಆಕೆ ಭಾನುವಾರ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾಳೆ.
ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದವರು ಘಟನೆಯನ್ನು ಖಂಡಿಸಿ ಬೀದಿಗಳಿದಿದ್ದಾರೆ. ಜಿಲ್ಲಾಡಳಿತವು ದುಮ್ಕಾದಲ್ಲಿ ನಿಷೇಧಾಜ್ಞೆಯನ್ನು ಹೇರಿದೆ.
ಪೊಲೀಸರ ಹೇಳಿಕೆಯಂತೆ 19ರ ಪ್ರಾಯದ ಶಾರೂಕ್ ಹುಸೇನ್ ಎಂಬಾತ, ಯುವತಿಯನ್ನು ಕೆಲವು ದಿನಗಳಿಂದ ಪೀಡಿಸುತ್ತಿದ್ದ. ಆಕೆ ಮುಖ್ಯ ರಸ್ತೆಗೆ ಪಕ್ಕದ ಹಾಲ್ ನಲ್ಲಿ ಕಿಟಕಿಯ ಬಳಿ ಮಲಗಿದ್ದಳು. ಆಗ ಆರೋಪಿಯು ಕಿಟಕಿಯಿಂದ ಪೆಟ್ರೋಲು ಸುರಿದು ಆಕೆಗೆ ಬೆಂಕಿ ಹಚ್ಚಿದ್ದಾಗಿ ಆರೋಪಿಸಲಾಗಿದೆ. ಆಗಸ್ಟ್ 23ರಂದು ಈ ಘಟನೆ ನಡೆದಿದ್ದು, ಆಕೆಗೆ ಸಹಾಯಕ್ಕೆ ಕಿರುಚಿಕೊಂಡಿದಲ್ಲದೆ, ಓಡಿ ಹೋದ ಬೆಂಕಿ ಹಾಕಿದವನನ್ನು ನೋಡಿದ್ದಾಗಿ ಎಂದು ದುಮ್ಕಾ ಎಸ್ ಪಿ ಅಂಬರ್ ಲಾಕ್ರಾ ತಿಳಿಸಿದ್ದಾರೆ.
ಹುಸೇನ್ ನನ್ನು ಅದೇ ದಿನ ಇನ್ನೊಬ್ಬ ಆರೋಪಿ ಚೋಟು ಖಾನ್ ಜೊತೆ ಬಂಧಿಸಲಾಗಿದೆ. ಚೋಟು ಖಾನ್ ಪೆಟ್ರೋಲು ತಂದು ಕೊಟ್ಟವನಾಗಿದ್ದು ಇಬ್ಬರ ವಿರುದ್ಧವೂ ಕೊಲೆ ಆರೋಪ ದಾಖಲಾಗಿದೆ.
ದುಮ್ಕಾ ಸಹ ವಿಭಾಗೀಯ ಅಧಿಕಾರಿ ಮಹೇಶ್ವರ ಮಹತೋ ಅವರು ಭಾರತೀಯ ದಂಡ ಸಂಹಿತೆ 144ರಡಿ ನಿಷೇಧಾಜ್ಞೆ ಹೇರಿದ್ದಾಗಿ ಹೇಳಿದ್ದಾರೆ. “ಯಾವುದೇ ಪೂರ್ವಾನುಮತಿ ಇಲ್ಲದೆ ಯಾವುದೇ ಬಗೆಯಲ್ಲಿ ಸಾರ್ವಜನಿಕರು ಗುಂಪು ಸೇರುವಂತಿಲ್ಲ; ಧಾರ್ಮಿಕ ಮೆರವಣಿಗೆಗಳಿಗೆ ತಡೆ ಮಿತಿ ಹೇರಲಾಗಿದೆ ಎಂದು ಅವರು ತಿಳಿಸಿದ್ದಾರೆ.
ದುಮ್ಕಾ ಫೂಲೋ ಜಾನೋ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಮೃತಳನ್ನು ಸೇರಿಸಲಾಗಿತ್ತು. ಅನಂತರ ವೈದ್ಯರ ಹೇಳಿಕೆಯಂತೆ ರಾಂಚಿಯ ರಾಜೇಂದ್ರ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ ಗೆ ಒಯ್ಯಲಾಗಿದೆ. ಅಲ್ಲಿ ಆಕೆ ಮೃತಪಟ್ಟಿದ್ದಾಳೆ.
“ನಾವು ವೇಗವಾಗಿ ತನಿಖೆ ಮುಗಿಸುವಂತೆ ಶಿಫಾರಸು ಮಾಡಿದ್ದೇವೆ. ಮೃತಳ ಕುಟುಂಬಕ್ಕೆ ರೂ. 1 ಲಕ್ಷ ಪರಿಹಾರ ನೀಡಿದ್ದೇವೆ. ಕುಟುಂಬಕ್ಕೆ ಸರಕಾರದಿಂದ ಇನ್ನೂ ಹೆಚ್ಚು ಪರಿಹಾರ ಸಿಗುವಂತೆಯೂ ಮಾಡಲಾಗುತ್ತಿದೆ. ಆರೋಪಿಯು ಮೃತಳನ್ನು ಪೀಡಿಸುತ್ತಿದ್ದರೂ, ಕುಟುಂಬದವರು ದೂರು ನೀಡಿರಲಿಲ್ಲವಾದ್ದರಿಂದ ಪೋಲೀಸರಿಗೆ ಈ ವಿಷಯವೇ ತಿಳಿದಿರಲಿಲ್ಲ” ಎಂದು ಜಿಲ್ಲಾಧಿಕಾರಿ ಆರ್. ಎಸ್. ಶುಕ್ಲಾ ಹೇಳಿದ್ದಾರೆ.
“ಬೆಳಿಗ್ಗೆ ನಾಲ್ಕು ಗಂಟೆಯ ಹೊತ್ತು. ನಾವು ಆಕೆಯ ಚೀರಾಟವನ್ನು ಕೇಳಿ ಎದ್ದೆವು. ನಾವು ಧಾವಿಸಿ ಹೋಗಿ ಬೆಂಕಿಯನ್ನು ನಂದಿಸಿದೆವು. ಹುಸೇನ್ ಇದನ್ನು ಮಾಡಿದ್ದು ಎಂದು ಆಕೆ ಹೇಳಿದಳು. ಆಕೆಯು ಶನಿವಾರ ಭಾನುವಾರದ ನಡುವೆ ಕೊನೆಯುಸಿರೆಳೆದಿದ್ದಾಳೆ ಎಂದು ಮೃತಳ ತಂದೆ ಹೇಳಿದರು.